ರಾಜ್ಯ ಲೋಕಾಯುಕ್ತದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಬೆಳಗಾವಿ ತಾಲೂಕು ಮುಚ್ಚಂಡಿ ಗ್ರಾಮ ಪಂಚಾಯಿತಿಗೆ ಶನಿವಾರ ಭೇಟಿ ನೀಡಿ, ಹಾಜರಿ ಪುಸ್ತಕ, ಸಿಬ್ಬಂದಿಗಳ ವಿವರ, ಸಾರ್ವಜನಿಕ ಅರ್ಜಿಗಳ ವಿಲೇವಾರಿ, ವಹಿವಾಟು ಹಾಜರಾತಿ ಪರಿಶೀಲಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಮೂವ್ಮೆಂಟ್ ರಿಜಿಸ್ಟರ್, ಸಿಬ್ಬಂದಿಗಳ ವಿವರ, ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳು ಮತ್ತು ಅವುಗಳ ವಿಲೇವಾರಿ ಹಾಗೂ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.
ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಾತಿ ನಿರ್ವಹಿಸಬೇಕು. ಕರ್ತವ್ಯದ ಸಮಯದಲ್ಲಿ ಕಚೇರಿಯಲ್ಲಿ ಲಭ್ಯವಿರಬೇಕು. ಹಾಜರಾತಿ ಮತ್ತು ಚಲನವಲನ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಚರಂಡಿ ನೀರಿನ ಸಮರ್ಪಕ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ ಇಂಗು ಗುಂಡಿಗಳನ್ನು ನಿರ್ಮಿಸಬೇಕು. ಈ ಕಾಮಗಾರಿಗಳಲ್ಲಿ ಅನುದಾನ ದುರ್ಬಳಕೆ ಅಥವಾ ಅಕ್ರಮಗಳು ನಡೆದಿರುವುದು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಗಮನಕ್ಕೆ ಬಂದಿದ್ದು, ಕೆಟ್ಟುಹೋಗಿರುವ ಬೋರ್ವೆಲ್ಗಳನ್ನು ತಕ್ಷಣ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು.
ಕಾಮಗಾರಿ ನಡೆಸದೆ ಹಣ ಬಿಡುಗಡೆ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದು, ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ಎಸಗುವುದು ಅಥವಾ ಸರಕಾರಿ ಹಣ ದುರ್ಬಳಕೆ ಮಾಡಿಕೊಳ್ಳುವುದು ಕಂಡುಬಂದಲ್ಲಿ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿ. ವೀರಪ್ಪ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಉಪ ನಿಬಂಧಕ ಅರವಿಂದ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ್, ಬೆಳಗಾವಿ ಲೋಕಾಯುಕ್ತ ಅಧೀಕ್ಷಕ ಪ್ರಸನ್ನ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
