Vijaypura

ಆತ್ಮವಿಶ್ವಾಸವೇ ಯಶಸ್ಸಿನ ಮೊದಲ ಮೆಟ್ಟಿಲು: ಸಂಗಮೇಶ ಬಬಲೇಶ್ವರ

Share

ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಮೊದಲು ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು. ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಹಾಗೂ ಪ್ರಾಮಾಣಿಕತೆಯೊಂದಿಗೆ ಮುನ್ನಡೆದರೆ ಆತ್ಮವಿಶ್ವಾಸದ ಬಲದಿಂದ ಜಗತ್ತನ್ನೇ ಗೆಲ್ಲಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಮಾಣಿಕೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ, ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶುಚಿ ಹಾಗೂ ರುಚಿಯಾದ ಊಟ, ಶುದ್ಧ ಕುಡಿಯುವ ನೀರು ಒದಗಿಸುವುದರ ಜೊತೆಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಸಂಸ್ಥೆಯ ಅಧ್ಯಕ್ಷರ ಕಾರ್ಯ ಅಭಿನಂದನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಗಜ್ಯೋತಿ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಎಲ್.ಬಿ. ಪಾಟೀಲ ಹಾಗೂ ಶಿಕ್ಷಕ ಸಂಘಟನೆಯ ಅಧ್ಯಕ್ಷ ಅಶೋಕಗೌಡ ಬಿರಾದಾರ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಿದಾನಂದ ಅವಟಿ ವಹಿಸಿದ್ದರು. ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:

error: Content is protected !!