Belagavi

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 16 ರಂದು ಡಿಸಿ ಕಚೇರಿ ಎದುರು ಧರಣಿ

Share

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಡಿಸೆಂಬರ್ 1, 2 ಮತ್ತು 3 ರಂದು ದೆಹಲಿಯಲ್ಲಿ ನಡೆಯಲಿರುವ ‘ದೆಹಲಿ ಚಲೋ’ ಬೃಹತ್ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ನಾಗಪ್ಪ ಸಂಗೊಳ್ಳಿ ತಿಳಿಸಿದ್ದಾರೆ.

ಇಂದು ನಡೆದ ಸಭೆಯ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಹಳೆಯ ಕಾರ್ಮಿಕ ಕಾನೂನುಗಳನ್ನು ರದ್ದುಮಾಡಿ ಹೊಸ ನಾಲ್ಕು ಸಂಹಿತೆಗಳನ್ನು (Codes) ಜಾರಿಗೆ ತಂದಿರುವುದನ್ನು ತೀವ್ರವಾಗಿ ವಿರೋಧಿಸಿದರು. ಹಿಂದೆ 10 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಮನೆ ನಿರ್ಮಿಸುವ ಮಾಲೀಕರಿಂದ ಕಟ್ಟಡ ಕಾರ್ಮಿಕರ ಸೆಸ್ (Cess) ಸಂಗ್ರಹಿಸಲಾಗುತ್ತಿತ್ತು. ಆದರೆ ಈಗ ಸರ್ಕಾರವು ಈ ಮಿತಿಯನ್ನು 50 ಲಕ್ಷ ರೂಪಾಯಿಗೆ ಏರಿಸಿದ್ದು, ಇದರಿಂದ ಕಾರ್ಮಿಕರಿಗೆ ಸಿಗಬೇಕಾದ ಮದುವೆ ಧನಸಹಾಯ, ಪಿಂಚಣಿ, ಮತ್ತು ಮಕ್ಕಳ ಸ್ಕಾಲರ್‌ಶಿಪ್‌ನಂತಹ ಸೌಲಭ್ಯಗಳಿಗೆ ಭಾರೀ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಮಿಕರಿಗೆ ತೊಂದರೆಂಟು ಮಾಡುವ ಈ ಕಾನೂನು ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಜೊತೆಗೆ, ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಕಾರ್ಮಿಕ ಸೌಲಭ್ಯ ಪಡೆಯುವ ವ್ಯವಸ್ಥೆಯನ್ನು ರದ್ದುಪಡಿಸಿ, ಹಿಂದೆ ಇದ್ದಂತೆ ಕಾರ್ಮಿಕ ನಿರೀಕ್ಷಕರಿಗೇ ಕಾರ್‌್ಳಗಳ ಪರಿಶೀಲನೆ ಹಾಗೂ ಮದುವೆ ಧನಸಹಾಯ, ಪಿಂಚಣಿ ವಿತರಿಸುವ ಅಧಿಕಾರವನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿ ನವೆಂಬರ್ 16 ರಂದು ರಾಜ್ಯಾದ್ಯಂತ ಎಲ್ಲಾ ಡಿಸಿ (DC) ಕಚೇರಿಗಳ ಮುಂದೆ ಸಿಐಟಿಯು (CITU) ಸಂಘಟನೆಯ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ನು ಜಿಲ್ಲಾ ಕಾರ್ಯದರ್ಶಿ ದಿಲೀಪ್ ವಾರಕೆ ಅವರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಹಿಂದೆ ಸಿಗುತ್ತಿದ್ದ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ಈಗ ಸಿಗುತ್ತಿಲ್ಲವೆಂದು ಆಕ್ಷೇಪಿಸಿ, ಕಾರ್ಮಿಕ ಕಾರ್ಡ್ ನವೀಕರಣಕ್ಕೆ ಅಕ್ರಮವಾಗಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಹಾಗೂ ಮಂಡಳಿಯ ಹಣವನ್ನು ಬೇರೆ ಸಂಸ್ಥೆಗಳಿಗೆ ನೀಡುವುದನ್ನು ಖಂಡಿಸಿ ನವೆಂಬರ್ 16 ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಈ ಧೋರಣೆ ವಿರೋಧಿಸಿ ಡಿಸೆಂಬರ್ 1 ರಿಂದ ದೆಹಲಿಯಲ್ಲಿ ರಾಷ್ಟ್ರಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಈ ವೇಳೆ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ಧರು.

Tags:

error: Content is protected !!