ಖಾನಾಪುರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿಯ ಸರ್ಕಾರಿ ಕಾರ್ಯಾಲಯದಲ್ಲಿ ನಿಯಮಬಾಹಿರವಾಗಿ ಖಾಸಗಿ ಸಂಸ್ಥೆಯ ಶಿಬಿರ ನಡೆಸಲು ಅವಕಾಶ ಮಾಡಿಕೊಟ್ಟು, ಅಧ್ಯಕ್ಷ ಹಾಗೂ ಪಿಡಿಒ ಆಸನಗಳಲ್ಲಿ ಖಾಸಗಿ ವ್ಯಕ್ತಿಗಳು ವಿರಾಜಮಾನರಾಗಲು ಕಾರಣರಾದ ಪಿಡಿಒ ಮಂಜುನಾಥ ರಾಠೋಡ ಅವರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ರಮೇಶ್ ಮೇತ್ರಿ ನೋಟಿಸ್ ಜಾರಿ ಮಾಡಿದ್ದಾರೆ.

‘ಇನ್ ನ್ಯೂಸ್’ ವಾಹಿನಿಯು ಸರ್ಕಾರಿ ಕಚೇರಿಯ ದುರ್ಬಳಕೆ ಹಾಗೂ ಘನತೆಗೆ ಬಂದ ಧಕ್ಕೆಯನ್ನು ಎತ್ತಿಹಿಡಿದು ಸತತ ಸುದ್ದಿ ಪ್ರಸಾರ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತಂದಿತ್ತು. ಈ ವರದಿಗೆ ತಕ್ಷಣ ಸ್ಪಂದಿಸಿದ ಇಒ ರಮೇಶ್ ಮೇತ್ರಿ ಅವರು, ಕಚೇರಿಯ ಘನತೆ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಜವಾಬ್ದಾರಿಯುತ ಅಧಿಕಾರಿಗೆ ನೋಟಿಸ್ ಮುಟ್ಟಿದ ತಕ್ಷಣವೇ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ, ಕರ್ನಾಟಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ಅಡಿಯಲ್ಲಿ ಕಠಿಣ ಶಿಸ್ತುಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಸರ್ಕಾರಿ ಸ್ವತ್ತುಗಳ ದುರ್ಬಳಕೆ ತಡೆದು ಕಚೇರಿಯ ಘನತೆ ಎತ್ತಿಹಿಡಿಯುವಲ್ಲಿ ‘ಇನ್ ನ್ಯೂಸ್’ ತೋರಿದ ಸಾಮಾಜಿಕ ಕಾಳಜಿಗೆ ಸಾರ್ವಜನಿಕ ವಲಯದಿಂದ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
