ಬೆಳಗಾವಿ ಸಮೀಪದ ಜಾಗೃತ ಪುಣ್ಯಕ್ಷೇತ್ರ ಸುಳೇಭಾವಿಯ ಶ್ರೀ ಮಹಾಲಕ್ಷ್ಮಿ (ದ್ಯಾಮವ್ವ) ದೇವಾಲಯದಲ್ಲಿ ನವರಾತ್ರಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ತಾಯಿಯ ದಿವ್ಯ ದರ್ಶನಕ್ಕಾಗಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

ಬೆಳಗಾವಿಯಿಂದ ಕೇವಲ 17 ಕಿ.ಮೀ. ದೂರದಲ್ಲಿರುವ ಸುಳೇಭಾವಿಯ ಶ್ರೀ ಮಹಾಲಕ್ಷ್ಮಿ (ದ್ಯಾಮವ್ವ) ದೇವಿಯ ಸುಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಕಳೆಕಟ್ಟಿದೆ. 500 ವರ್ಷಗಳ ಹಳೆಯ ಪುರಾತನ ದಿವ್ಯ ಮೂರ್ತಿಯನ್ನು ಹೊಂದಿರುವ ಈ ಜಾಗೃತ ಕ್ಷೇತ್ರದಲ್ಲಿ ನವರಾತ್ರಿಯ ಪ್ರತಿ ದಿನವೂ ದೇವಿಗೆ ವಿಶೇಷ ಪೂಜೆ, ಪಾರಾಯಣ ಹಾಗೂ ಕಣ್ಣುತುಂಬುವ ಹೊಸ ಸೀರೆಗಳ ಅಲಂಕಾರ ನೆರವೇರಿಸಲಾಗುತ್ತಿದೆ. ಐದು ತಲೆಗಳ ವಿಶಿಷ್ಟ ವಾಹನ, ಪೂರ್ವ-ಪಶ್ಚಿಮದ ಪ್ರವೇಶದ್ವಾರಗಳು ಹಾಗೂ ಗೋಡೆ-ಕಂಬಗಳಿಗೆ ನಾಣ್ಯಗಳನ್ನು ತಗುಲಿಸುವ ವಿಶಿಷ್ಟ ಸಂಪ್ರದಾಯ ಹೊಂದಿರುವ ಈ ದೇಗುಲಕ್ಕೆ ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಿಂದಲೂ ಪ್ರತಿದಿನ ಸಾವಿರಾರು ಭಕ್ತರು ಆಗಮಿಸಿ, ತೆಂಗಿನಕಾಯಿ ಕಟ್ಟುವುದು ಮತ್ತು ‘ಕವಲು’ ಪ್ರಸಾದ ಪಡೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ವಾಲ್ಮೀಕಿ ಸಮುದಾಯದ ಅರ್ಚಕರಿಂದ ಯಾವುದೇ ಕಟ್ಟುಪಾಡುಗಳಿಲ್ಲದೆ ನಡೆಯುವ ಸರಳ ಪೂಜಾ ಪದ್ಧತಿಯು ಈ ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. ಇಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಬೃಹತ್ ಜಾತ್ರಾ ಮಹೋತ್ಸವದ ವೈಭವವೂ ಸಾಟಿಯಿಲ್ಲದ್ದು. ಬಡಿಗೇರ ಮನೆಯಲ್ಲಿ ಉಡಿ ತುಂಬುವುದರೊಂದಿಗೆ ಆರಂಭವಾಗುವ ದೇವಿಯ ‘ಹೊನ್ನಾಟ’ವನ್ನು ಗ್ರಾಮದ ಹಕ್ಕುದಾರರು ಹೆಗಲ ಮೇಲೆ ಹೊತ್ತು ನೆರವೇರಿಸುತ್ತಾರೆ. ಒಂಬತ್ತು ದಿನಗಳ ಕಾಲ ಧಾರ್ಮಿಕ ವಿಧಿವಿಧಾನಗಳು, ನಿತ್ಯಪೂಜೆ ಹಾಗೂ ಲಕ್ಷಾಂತರ ಭಕ್ತರ ಸಮಕ್ಷಮದಲ್ಲಿ ನಡೆಯುವ ಜಾತ್ರೆಯು ಕೊನೆಯ ದಿನದ ಹೊನ್ನಾಟ ಮತ್ತು ಪ್ರದಕ್ಷಿಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಪ್ರಸ್ತುತ ನವರಾತ್ರಿ ಸಂದರ್ಭದಲ್ಲೂ ದೇವಾಲಯದಲ್ಲಿ ಭಕ್ತಿಪರವಶತೆಯ ವಾತಾವರಣ ನಿರ್ಮಾಣವಾಗಿದ್ದು, ಭಕ್ತಸಾಗರವೇ ಹರಿದುಬರುತ್ತಿದೆ.
