Belagavi

ಬೆಳಗಾವಿ ಜತ್ತಿ ಮಠದಲ್ಲಿ ನವರಾತ್ರಿ ಹಾಗೂ ದಸರಾ ಮಹೋತ್ಸವ ಸಂಭ್ರಮ

Share

ಬೆಳಗಾವಿಯ ಐತಿಹಾಸಿಕ ಜತ್ತಿ ಮಠದಲ್ಲಿ ನವರಾತ್ರಿ ಹಾಗೂ ದಸರಾ ಮಹೋತ್ಸವದ ಅಂಗವಾಗಿ ವಿಶೇಷ ಹಲ್ತಾ ದೇಖಾವಾ ಮತ್ತು ದಕ್ಷಿಣ ಭಾರತದ ಪ್ರಥಮ 3D ನರಸಿಂಹ ಮೂರ್ತಿಯು ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ಮರಾಠ ಸಮುದಾಯದ ಹಾಗೂ ಹಿಂದೂ ಬಾಂಧವರ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಈ ಮಠದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಸಮ್ಮಿಲನ ಹೇಗೆ ಮೂಡಿಬಂದಿದೆ ಎಂಬುದರ ವಿಶೇಷ ವರದಿ ಇಲ್ಲಿದೆ.

ಬೆಳಗಾವಿಯ ಮರಾಠ ಸಮುದಾಯದ ಆರಾಧ್ಯ ದೈವತ ಐತಿಹಾಸಿಕ ಜತ್ತಿ ಮಠದಲ್ಲಿ ನವರಾತ್ರಿ ಹಾಗೂ ದಸರಾ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಹಲ್ತಾ ದೇಖಾವಾ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆಯುತ್ತಿವೆ. ಮಾಜಿ ಶಾಸಕ ಅನಿಲ ಬೆನಕೆ ಅವರು ದೀಪ ಬೆಳಗಿಸಿ ಈ ಅದ್ಭುತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಛತ್ರಪತಿ ಸಂಭಾಜಿ ಮಹಾರಾಜರು ಭೇಟಿ ನೀಡಿದ್ದರಿಂದ ಈ ಭೂಮಿ ಅತ್ಯಂತ ಪುಣ್ಯಭೂಮಿಯಾಗಿದೆ ಎಂದು ಬಣ್ಣಿಸಿದರು. ಮಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಭಗವಾನ್ ನರಸಿಂಹನ ಅಪರೂಪದ ಹಾಗೂ ಭವ್ಯ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಕರೆ ನೀಡಿದರು.

ಈ ವರ್ಷ ಮಠದಲ್ಲಿ ಆಯೋಜಿಸಲಾಗಿರುವ ವಿಶೇಷ ಅಲಂಕಾರ ಹಾಗೂ ದೃಶ್ಯಾವಳಿಗಳು ಎಲ್ಲರ ಮನಸ್ಸಿಗೆ ಮುದ ನೀಡುತ್ತಿವೆ. ಅದರಲ್ಲೂ ವಿಶೇಷವಾಗಿ, ಉತ್ಸವ ಮೂರ್ತಿಯಾಗಿ ಪ್ರತಿಷ್ಠಾಪಿಸಲಾಗಿರುವ ಭಗವಾನ್ ನರಸಿಂಹನ ಮೂರ್ತಿಯು ದಕ್ಷಿಣ ಭಾರತದಲ್ಲೇ ಪ್ರಥಮ 3D ಪ್ರಿಂಟೆಡ್ ಮೂರ್ತಿಯಾಗಿದೆ ಎಂದು ಪ್ರಮುಖರಾದ ದತ್ತಾ ಜಾಧವ್ ಹೆಮ್ಮೆಯಿಂದ ಘೋಷಿಸಿದ್ದಾರೆ.
ಇದರೊಂದಿಗೆ ದುರ್ಗಾ ದೇವಿ ಮಂದಿರದಲ್ಲಿ ನಾಶಿಕದ ಸಪ್ತಶೃಂಗಿ ದೇವಿ ಹಾಗೂ ವಿವಿಧ ದೇವಿಯರ ಪ್ರತಿರೂಪಗಳನ್ನು ಅತ್ಯಂತ ಆಕರ್ಷಕವಾಗಿ ಸಿದ್ಧಪಡಿಸಲಾಗಿದೆ. ಈ ಎಲ್ಲ ವೈವಿಧ್ಯಮಯ ಧಾರ್ಮಿಕ ಆಚರಣೆಗಳು ಭಕ್ತರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿವೆ ಎಂದು ರಂಜಿತ್ ಚವ್ಹಾಣ್ ಪಾಟೀಲ್ ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀರಾಮ ಸೇನಾ ಹಿಂದೂಸ್ಥಾನದ ರಮಾಕಾಂತ ಕೊಂಡುಸ್ಕರ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಮಾತನಾಡಿದರು. ಮಠ ಮತ್ತು ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಹಾಗೂ ಮಠದ ಜಮೀನು ಒತ್ತುವರಿ ತೆರವುಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ದತ್ತಾ ಜಾಧವ್ ಅವರ ನೇತೃತ್ವದಲ್ಲಿ ಟ್ರಸ್ಟ್ ಕಮಿಟಿಯ ಸದಸ್ಯರಾದ ಮದನ್ ಬಾಮನೆ, ಸಾಗರ್ ಪಾಟೀಲ್ ಸೇರಿದಂತೆ ಇನ್ನುಳಿದವರು ಪ್ರತಿವರ್ಷ ನಾವಿನ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಕ್ಕೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ನವರಾತ್ರಿ ಹಾಗೂ ದಸರಾ ಅಂಗವಾಗಿ ಮಠದಲ್ಲಿ ಜರುಗ್ತಿರುವ ಈ ಉತ್ಸವವು ಬೆಳಗಾವಿಯ ಜನತೆಯಲ್ಲಿ ಭಕ್ತಿ ಹಾಗೂ ಧಾರ್ಮಿಕ ಭಾವನೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

Tags:

error: Content is protected !!