State

ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆ: ನವೆಂಬರ್ 1ರಿಂದ ಹೊಸ ದರ ಜಾರಿ

Share

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟಿದೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದ್ದು, ಪರಿಷ್ಕೃತ ದರವು ನವೆಂಬರ್ 1ರಿಂದ ಜಾರಿಗೆ ಬರಲಿದೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ ಅವರು, ಹಾಲು ಉತ್ಪಾದಕ ರೈತರ ಸುದೀರ್ಘ ಹೋರಾಟ ಹಾಗೂ ಬೇಡಿಕೆಗೆ ಸ್ಪಂದಿಸಿ ದರ ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚಿಸಲಾದ 8 ರೂಪಾಯಿಗಳಲ್ಲಿ 7 ರೂಪಾಯಿ ನೇರವಾಗಿ ರೈತರ ಖಾತೆಗೆ ತಲುಪಲಿದ್ದು, ಉಳಿದ 1 ರೂಪಾಯಿ ಹಾಲು ಒಕ್ಕೂಟಗಳ ನಿರ್ವಹಣೆಗೆ ಬಳಕೆಯಾಗಲಿದೆ. ಇದರಿಂದಾಗಿ ಸರ್ಕಾರ ನೀಡುವ ಪ್ರೋತ್ಸಾಹ ಧನದೊಂದಿಗೆ ರೈತರಿಗೆ ಪ್ರತಿ ಲೀಟರ್‌ಗೆ ಒಟ್ಟು 47 ರೂಪಾಯಿ ಲಭಿಸಲಿದೆ.

ಕಾಡಿನ ಅಂಚಿನಲ್ಲಿ ವಾಸಿಸುವ ಅತಿ ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳ (PVTGs) ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ‘ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದೆ. ಇರುಳಿಗ, ಸೋಲಿಗ, ಜೇನುಕುರುಬ, ಸಿದ್ಧಿ ಸೇರಿದಂತೆ 32 ಪಂಗಡಗಳ 2.82 ಲಕ್ಷ ಜನರಿಗೆ ಅನುಕೂಲವಾಗಲಿದ್ದು, ಆರಂಭಿಕವಾಗಿ 33.36 ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಲಾಗಿದೆ. ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 9,243 ಮಹಿಳೆಯರ ಸ್ವಾವಲಂಬನೆಗೆ 16 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಲಿಗೆ ಯಂತ್ರ ವಿತರಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು ನಗರದ ಅಭಿವೃದ್ಧಿಗೂ ಹಲವಾರು ಯೋಜನೆಗಳಿಗೆ ಹಸಿರುನಿಶಾನೆ ತೋರಿಸಲಾಗಿದೆ. ಕುಡಿಯುವ ನೀರು ಸರಬರಾಜು ಸುಧಾರಣೆಗೆ ಪುಲಕೇಶಿನಗರ ಮತ್ತು ಬನಶಂಕರಿ ಭಾಗಗಳಲ್ಲಿ 61 ಕೋಟಿ ರೂಪಾಯಿ ವೆಚ್ಚದಲ್ಲಿ ಜಲ ಸಂಗ್ರಹಾರ ಹಾಗೂ ಕಾಚಾರಕನಹಳ್ಳಿಯಲ್ಲಿ 51 ಕೋಟಿ ರೂಪಾಯಿ ವೆಚ್ಚದಲ್ಲಿ 10 ಮಿಲಿಯನ್ ಲೀಟರ್ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಸರ್ಕಾರದ ಯೋಜನೆಗಳ ಮೌಲ್ಯಮಾಪನಕ್ಕೆ ‘ಪ್ರಾಜೆಕ್ಟ್ ಇ-ಮಾನಿಟರ್’ ಜಾರಿ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಜಿಪಿಎಸ್ ವಾಹನಗಳ ಬಳಕೆಗೆ ಅಂತಿಮ ಟೆಂಡರ್ ಒಪ್ಪಿಗೆ ದೊರೆತಿದ್ದು, ಮುಂಬರುವ ವಿಧಾನಮಂಡಲ ಅಧಿವೇಶನ ನವೆಂಬರ್ 30ರಿಂದ ಆರಂಭವಾಗಲಿದೆ.

Tags:

error: Content is protected !!