ಬೆಳಗಾವಿಯಲ್ಲಿ ಅಕ್ರಮ ಗಾಂಜಾ ಮಾರಾಟ ದಂಧೆಗೆ ಸಿಸಿಬಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.
ಬೆಳಗಾವಿ ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಗೋಳ-ವಡಗಾವಿ ರಸ್ತೆಯ ಕಾಟಾ ಗ್ರೌಂಡ್ ಹಾಗೂ ಸಂತಮೀರಾ ಶಾಲೆ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ಸಿಸಿಬಿ ಪಿಐ ಮಂಜುನಾಥ ನಾಯಕ ಹಾಗೂ ಸಿಬ್ಬಂದಿ ಯಶಸ್ವಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಬೆಳಗಾವಿಯ ಕೃಷ್ಣ ಪಾಟೀಲ (24) ಹಾಗೂ ರೂಪೇಶ ಶಿಂದೆ (26) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 70,000 ರೂಪಾಯಿ ಮೌಲ್ಯದ 1.346 ಕೆಜಿ ಗಾಂಜಾ ಮತ್ತು 1 ಲಕ್ಷ ರೂಪಾಯಿ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಸೇರಿ ಒಟ್ಟು ₹1,70,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗಾಂಜಾವನ್ನು ಖಾನಾಪುರದ ‘ವಿನು’ ಎಂಬಾತನಿಂದ ತಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಮೂರನೇ ಆರೋಪಿಯ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ.
