hubbali

ರೈತರಿಗೆ ನ್ಯಾಯ ದೊರೆಯುವವರೆಗೆ ಸಕ್ಕರೆ ತ್ಯಜಿಸುತ್ತನೆ : ಶ್ರೀ ದಿಂಗಾಲೇಶ್ವರ ಸ್ವಾಮೀಜಿ

Share

ದೇಶದಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರಸ್ತೆಗಿಳಿದು ಹೋರಾಟ ಮಾಡುತ್ತಿರುವ ಪರಿಸ್ಥಿತಿ ಕಳವಳಕಾರಿಯಾಗಿದ್ದು, ರೈತರಿಗೆ ನ್ಯಾಯ ದೊರೆಯುವವರೆಗೆ ತಾವು ಸಕ್ಕರೆ ಸೇವನೆಯನ್ನು ತ್ಯಜಿಸುವುದಾಗಿ ಫಕೀರ್ ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರು ಗಂಭೀರ ಪ್ರತಿಜ್ಞೆ ಮಾಡಿದರು.

​ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಸಿಲಿನಲ್ಲಿ ಹೆಂಡತಿ-ಮಕ್ಕಳನ್ನು, ಜಾನುವಾರುಗಳನ್ನು ಮನೆಯಲ್ಲಿ ಬಿಟ್ಟು ರಾತ್ರಿ ರಸ್ತೆಯಲ್ಲಿ ಮಲಗಿರುವ ರೈತರ ಸ್ಥಿತಿ ನಾಗರಿಕತೆ ಮತ್ತು ಮಾನವೀಯತೆಗೆ ತಲೆತಗ್ಗಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​​ಪೆಟ್ರೋಲ್ ಬೆಲೆಯನ್ನು ರಾತ್ರೋರಾತ್ರಿ ಹೆಚ್ಚಿಸುವ ಸರ್ಕಾರಗಳು, ಕೃಷಿಗೆ ಬಳಸುವ ಗೊಬ್ಬರ, ವಿದ್ಯುತ್, ನೀರು ಮತ್ತು ಕೂಲಿ ಹೆಚ್ಚಾದಾಗ ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಯಾಕೆ ಹೆಚ್ಚಿಸುವುದಿಲ್ಲ. ಕೇಂದ್ರ ಸರ್ಕಾರವು 2004-2006ರ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದೆ ರೈತರಿಗೆ ಮೋಸ ಮಾಡುತ್ತಿದೆ. ಇದು ರೈತ ವಿರೋಧಿ ಭಯೋತ್ಪಾದನಾ ನೀತಿಯಂತಿದೆ ಎಂದು ವಾಗ್ದಾಳಿ ನಡೆಸಿದರು.

ಕೇವಲ ರೈತರು ಮಾತ್ರವಲ್ಲದೆ, ರಾಜ್ಯದ ಎಲ್ಲ ಮಠಾಧೀಶರು ಪೂಜೆ-ಪುರಸ್ಕಾರಗಳನ್ನು ಬದಿಗಿಟ್ಟು ರಸ್ತೆಬದಿ ರೈತರ ಜೊತೆ ಕುಳಿತುಕೊಳ್ಳಬೇಕು. ಸಾಹಿತಿಗಳು, ಕಲಾವಿದರು, ಸಿನಿಮಾ ನಟರು ಮತ್ತು ಮಾಧ್ಯಮಗಳು ರೈತರ ಪರವಾಗಿ ನಿಲ್ಲಬೇಕು .ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಹುಚ್ಚು ಸಾಹಸಕ್ಕೆ ಕೈಹಾಕದೆ, ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕಿವಿಮಾತು ಹೇಳಿದರು. ರೈತರು ಈ ದೇಶದ ಮಾಲೀಕರೇ ಹೊರತು ಆಳುಗಳಲ್ಲ. ರೈತರ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ರೈತರು ಹೋರಾಟ ಮಾಡುತ್ತಿರುವ ಧಾರವಾಡದ ಎರಿಕೊಪ್ಪ ಹೆದ್ದಾರಿ ಹಾಗೂ ಬೆಳಗಾವಿಯ ಹತ್ತರಗಿ ಬಳಿಯ ಹೆದ್ದಾರಿ ಸ್ಥಳಕ್ಕೆ ತೆರಳಿ, ರೈತರೊಟ್ಟಿಗೆ ಹೋರಾಟ ಮಾಡಲಾಗುವುದು ಎಂದರು.

Tags:

error: Content is protected !!