State

ಮತದಾರರ ಹಕ್ಕು ಕಿತ್ತುಕೊಂಡ ಸರ್ಕಾರಗಳನ್ನು ವಜಾಗೊಳಿಸಿಬೇಕು

Share

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಹೆಸರಿನಲ್ಲಿ ಕೊಳ್ಳೆ ಹೊಡೆದವರ ಮತದಾರರ ಹಕ್ಕನ್ನು ಕಿತ್ತುಕೊಂಡು ಅಧಿಕಾರಕ್ಕೆ ಬಂದ ಸರ್ಕಾರಗಳನ್ನು ವಜಾಗೊಳಿಸಬೇಕು. ಅಲ್ಲಿ ಹೊಸದಾಗಿ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಹೋರಾಟ ನಡೆಸಲಿದೆ ಎಂದು ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕಲಬುರ್ಗಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2023ರಲ್ಲಿಯೇ ಚುನಾವಣಾ ಆಯುಕ್ತರು ಯಾವುದೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಬರಾಮೋನ್ ಮಾಫ್ ಮಾಡಿದ್ದರಿಂದ ಮುಖ್ಯ ಚುನಾವಣಾ ಆಯುಕ್ತರು ತಮ್ಮ ಅಧಿಕಾರವನ್ನು ಬಳಸಿಕೊಂಡು ಮನಬಂದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕ ಮತದಾನದ ಬಗ್ಗೆ ಅರಿವಿಲ್ಲದವರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ. ಇದರ ಲಾಭ ಪಡೆದುಕೊಂಡ ಬಿಜೆಪಿಯು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಮತದ ಅಧಿಕಾರ ಕಿತ್ತುಕೊಳ್ಳಲು ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮೂಲಕ ಎಸ್‌ಐಆರ್‌ ಮಾಡಿಸುವುದು, ಫಾರ್ಮ್‌ 6, 7 ಬಳಸಿಕೊಂಡು ತಮಗೆ ಬೇಕಾದವರ ಹೆಸರನ್ನು ಸೇರಿಸುವುದು, ರದ್ದುಗೊಳಿಸುವುದು ಮಾಡುತ್ತಿದೆ. ಇದನ್ನು ಕಾಂಗ್ರೆಸ್‌ ಸಹಿಸುವುದಿಲ್ಲ. ಇತ್ತೀಚೆಗೆ ನನ್ನ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಪಕ್ಷಗಳ ಸಭೆಯಲ್ಲಿ ಎಸ್‌ಐಆರ್‌ ಅಕ್ರಮಗಳ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಲಾಗಿದೆ’ ಎಂದರು.

‘ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಒಬ್ಬ ಕಾಂಗ್ರೆಸ್ಸಿಗನಾಗಿ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಜನರ ಮತಾಧಿಕಾರವನ್ನು ಉಳಿಸುವ ಕೆಲಸ ಮಾಡಿದ್ದಾರೆ. ಆಯೋಗವು ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಇದನ್ನು ಯಾರೂ ತಡೆಯಲಾಗದು’ ಎಂದು ಗುಡುಗಿದರು.

‘ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋದವರು ತಮಗೆ ಮತದ ಹಕ್ಕು ನೀಡುವಂತೆ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಹೆಚ್ಚು ವಿಳಂಬ ಮಾಡದೆ ಕಾಲಮಿತಿಯಲ್ಲಿ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದ್ದೇವೆ’ ಎಂದರು.
‘ಡಾ.ಬಿ.ಆರ್.ಅಂಬೇಡ್ಕರ್, ಜವಾಹರಲಾಲ್ ನೆಹರೂ ಅವರು ಮತಾಧಿಕಾರ ತಂದಿದ್ದು ವಿಶೇಷವಾಗಿ ಬಡವರಿಗಾಗಿ, ಸಾಮಾನ್ಯ ಜನರಿಗಾಗಿ. ಮತದ ಹಕ್ಕು ಸಿಗುವ ಮೊದಲು ಸಾಮಾನ್ಯರನ್ನು ಯಾರೂ ಕೇಳುತ್ತಿರಲಿಲ್ಲ. ಈಗ ಮನೆ ಮನೆಗೆ ಬಂದು ಮತ ಕೇಳುತ್ತಿದ್ದಾರೆ. ಪ್ರತಿಯೊಬ್ಬರ ಮತಾಧಿಕಾರ ಉಳಿಸಬೇಕು’ ಎಂದು ಹೇಳಿದರು.

Tags:

error: Content is protected !!