ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿ ಕೊಂಡು ಕಟಾವಿಗೆ ಬಂದಿದ್ದ ಐದು ಎಕರೆ ಕಬ್ಬಿನ ಫಸಲು ಸುಟ್ಟು ಕರಕಲಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

ಹೆಬ್ಬಾಳ ಗ್ರಾಮದ ರೈತ ಕಮಲಪ್ಪ ಪಟ್ಟಣಶೆಟ್ಟಿ ಅವರಿಗೆ ಸೇರಿದ ಜಮೀನಿನಲ್ಲಿ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಸಾಲಸೋಲ ಮಾಡಿ ಕಬ್ಬು ಬೆಳೆದಿದ್ದ ರೈತ, ಫಸಲು ಕಟಾವಿಗೆ ಬರುವ ಹಂತದಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಬೆಂಕಿ ನಂದಿಸುವಷ್ಟರಲ್ಲಿ ಕಬ್ಬಿನ ಫಸಲು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡದಿಂದ ಐದು ಎಕರೆ ಕಬ್ಬಿನ ಫಸಲು ಕಳೆದುಕೊಂಡಿರುವ ರೈತ ಕಮಲಪ್ಪ ಪಟ್ಟಣಶೆಟ್ಟಿ ಅವರಿಗೆ ಹೆಸ್ಕಾಂ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

