ಬೆಳಗಾವಿಯಲ್ಲಿ ನಡೆದ ವಿಭಾಗೀಯ ದಸರಾ ಈಜು ಸ್ಪರ್ಧೆಯಲ್ಲಿ ಬೆಳಗಾವಿ ತಂಡವು ಅದ್ಭುತ ಸಾಧನೆ ಮಾಡುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ತನುಜ್ ಸಿಂಗ್ ಹಾಗೂ ವೇದಾ ಖಾನೋಲ್ಕರ್ ತಲಾ 5 ಚಿನ್ನದ ಪದಕಗಳೊಂದಿಗೆ ಚಾಂಪಿಯನ್‍ಷಿಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಗೋವಾವೇಸ್‌ನ ಮಹಾನಗರ ಪಾಲಿಕೆ ಈಜುಕೊಳದಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯಲ್ಲಿ ಬೆಳಗಾವಿ, ಧಾರವಾಡ, ವಿಜಯಪುರ, ಗದಗ, ಹಾವೇರಿ, ಕಾರವಾರ ಹಾಗೂ ಬಾಗಲಕೋಟೆ ಜಿಲ್ಲೆಗಳ ಈಜುಪಟುಗಳು ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ತನುಜ್ ಸಿಂಗ್ ಹಾಗೂ ಮಹಿಳೆಯರ ವಿಭಾಗದಲ್ಲಿ ವೇದಾ ಖಾನೋಲ್ಕರ್ ತಲಾ ಐದು ಚಿನ್ನದ ಪದಕಗಳನ್ನು ಗೆದ್ದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಉಳಿದಂತೆ ಅಮನ್ ಸುನಗಾರ್, ಆರೋಹಿ ಅವಸ್ಥಿ, ಸಾಕ್ಷಿ ಶಿರಳಿ, ಸಾಯಲಿ, ಸೃಷ್ಟಿ, ಶರ್ಮಿಷ್ಠಾ ಹಾಗೂ ದರ್ಶನ್ ವರೂರ್ ಮುಂತಾದ ಈಜುಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಪದಕಗಳ ಬೇಟೆಯಾಡಿದರು. ವಿಜೇತ ಕ್ರೀಡಾಪಟುಗಳು ಅಕ್ಟೋಬರ್ 11 ರಿಂದ 14 ರವರೆಗೆ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಸಿಎಂ ಕಪ್‌ಗೆ ಆಯ್ಕೆಯಾಗಿದ್ದು, ಕ್ರೀಡಾ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್ ಅವರು ವಿಜೇತರಿಗೆ ಪದಕ ಹಾಗೂ ಟ್ರೋಫಿ ನೀಡಿ ಗೌರವಿಸಿದರು. ಈ ಯಶಸ್ಸಿಗೆ ಆಬಾ ಹಿಂದ್ ಕ್ಲಬ್‌ನ ತರಬೇತುದಾರರಾದ ವಿಶ್ವಾಸ್ ಪವಾರ್ ಹಾಗೂ ಪದಾಧಿಕಾರಿಗಳ ಶ್ರಮ ಪ್ರಮುಖವಾಗಿದೆ.
