ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತಾನೇ ವಾಸವಿದ್ದ ಮನೆಗೆ ಬೆಂಕಿ ಹಚ್ಚಿ, ಠಾಣೆಗೆ ಹೋಗಿ ಡ್ರಾಮಾ ಆಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಕುರುಬರ ಓಣಿಯ ಯುವಕರು, ಆರ್‌ಎಸ್‌ಎಸ್ ಸದಸ್ಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

ಧಾರವಾಡ ಕುರುಬರ ಓಣಿಯಲ್ಲಿ ಈ ದುರ್ಘಟನೆ ನಡೆದಿದೆ. ಜಾವೇದ್ ಡಲಾಯತ್ ತಾನು ವಾಸವಿದ್ದ ಮನೆಗೆ ಬೆಂಕಿ ಇಟ್ಟಿರುವ ಆರೋಪ ಕೇಳಿಬಂದಿದೆ. ಮನೆಯ ಒಳಾವರಣದಿಂದ ಬೆಂಕಿ ಹಾಗೂ ಹೊರಬರುತ್ತಿದ್ದ ಹೊಗೆಯನ್ನು ನೋಡಿದ ಓಣಿಯ ಯುವಕರು ಮತ್ತು ಆರ್‌ಎಸ್‌ಎಸ್ ಸದಸ್ಯರು ತಕ್ಷಣವೇ ಅಲರ್ಟ್ ಆಗಿ, ಅಕ್ಕಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ಪ್ರಯತ್ನಿಸಿದರು. ಜೊತೆಗೆ, ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಯುವಕರು ಹಾಗೂ ಆರ್‌ಎಸ್‌ಎಸ್ ಸದಸ್ಯರ ಸಹಕಾರದಿಂದ ಕೊನೆಗೆ ಬೆಂಕಿ ನಂದಿಸಿದರು.
ಇನ್ನೂ, ಮನೆಗೆ ಬೆಂಕಿ ಇಟ್ಟ ಆರೋಪ ಎದುರಿಸುತ್ತಿರುವ ಜಾವೇದ್, ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿ ಹಚ್ಚಿ ಶಹರ ಪೊಲೀಸ್ ಠಾಣೆಗೆ ಓಡಿಹೋಗಿ ಡ್ರಾಮಾ ಸೃಷ್ಟಿಸಿದ್ದಾನೆ ಎಂದು ತಿಳಿದುಬಂದಿದೆ. ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
