ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೋಲಿಸರು ರಂಗಕ್ಕಿಳಿದಿದ್ದಾರೆ. ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ, ಪಬ್-ಬಾರ್‌ಗಳಲ್ಲಿ ನಿಯಮ ಬಾಹಿರ ಕೃತ್ಯ ಹಾಗೂ ಕರ್ಕಶ ಧ್ವನಿವರ್ಧಕ ಬಳಸುತ್ತಿದ್ದ ಹೋಟೆಲ್, ಪಬ್ ಮತ್ತು ಕ್ಲಬ್‌ಗಳ ಮೇಲೆ ರಾತ್ರೋರಾತ್ರಿ ಸರಣಿ ದಾಳಿ ನಡೆಸಲಾಗಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ಡಿಸಿಪಿ ಅವರ ನೇತೃತ್ವದಲ್ಲಿ ಅಕ್ಟೋಬರ್ 10 ರಂದು ರಾತ್ರಿ ನಗರದ ಸುಮಾರು 60 ಕಡೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪರಿಶೀಲನೆ ಕೈಗೊಳ್ಳಲಾಗಿದೆ. ದಾಳಿ ವೇಳೆಯಲ್ಲಿ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು, ಮದ್ಯ ಸೇವನೆಗೆ ಅವಕಾಶ ಮಾಡಿಕೊಡುವುದು ಮತ್ತು ಸಮಯ ಹಾಗೂ ನಿಯಮ ಮೀರಿ ಕರ್ಕಶ ಧ್ವನಿವರ್ಧಕ/ಸೌಂಡ್ ಸಿಸ್ಟಮ್‌ಗಳನ್ನು ಬಳಸುತ್ತಿದ್ದ ಹೋಟೆಲ್, ಬಾರ್, ಕ್ಲಬ್ ಹಾಗೂ ಪಬ್‌ಗಳ ಮಾಲೀಕರು ಮತ್ತು ಮ್ಯಾನೇಜರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಈ ಸಂಬಂಧ ಕೆ.ಪಿ. ಆಕ್ಟ್, ಅಬಕಾರಿ ಕಾಯ್ದೆ ಹಾಗೂ ಬಿಎನ್‌ಎಸ್ ಕಾಯ್ದೆಗಳಡಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಜೊತೆಗೆ, ನಗರದಲ್ಲಿ ಇಂತಹ ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.
