ಬೆಳಗಾವಿಯ ಶಾಹು ನಗರದಲ್ಲಿ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಪೌರಕಾರ್ಮಿಕರಿಗೆ ರಕ್ಷಾ ಬಂಧನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲಾಯಿತು.


ಬೆಳಗಾವಿಯ ಶಾಹು ನಗರದಲ್ಲಿ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ರಕ್ಷಾ ಬಂಧನ ಹಬ್ಬದ ಅಂಗವಾಗಿ ಸಮಾಜದ ನಿಸ್ವಾರ್ಥ ಸೇವಕರಿಗೆ ವಿಶಿಷ್ಟ ರೀತಿಯಲ್ಲಿ ಗೌರವಾರ್ಪಣೆ ಮಾಡಲಾಯಿತು. ನಗರದ ಸ್ವಚ್ಛತೆ ಹಾಗೂ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಮಹಿಳೆಯರು ಉತ್ಸಾಹದಿಂದ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಸಹೋದರತ್ವದ ಭಾವನೆಯನ್ನು ಮೆರೆದರು. ಕೇವಲ ಅಣ್ಣ-ತಂಗಿಯರ ಸಂಬಂಧಕ್ಕೆ ಸೀಮಿತವಾಗದೆ, ಸಮಾಜವನ್ನು ಮುಕ್ತವಾಗಿ ಹಾಗೂ ಸ್ವಚ್ಛವಾಗಿಡುವವರೊಂದಿಗೆ ಬಾಂಧವ್ಯ ಬೆಸೆಯುವ ಈ ವಿನೂತನ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಕೃಷ್ಣ ಭಟ್, ಸಮಾಜದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರ ಸೇವೆ ಎಂದೆಂದಿಗೂ ಅನನ್ಯ ಎಂದು ಬಣ್ಣಿಸಿದರು. ನಮ್ಮ ಮನೆಯ ಕಸವನ್ನು ಹೊರಹಾಕಿ ಇಡೀ ಊರನ್ನು ಸ್ವಚ್ಛವಾಗಿಡುವ ಈ ಪೌರಕಾರ್ಮಿಕರೇ ನಮ್ಮ ನಿಜವಾದ ಮಿತ್ರ ಪರಿವಾರ ಹಾಗೂ ಪರಮಾತ್ಮನ ಸ್ವರೂಪಗಳು ಎಂದು ಅಭಿಪ್ರಾಯಪಟ್ಟರು. ಕನಿಷ್ಠ ಪಕ್ಷ ಐದು ಜನ ಪೌರಕಾರ್ಮಿಕರಿಗಾದರೂ ವಿಶೇಷವಾಗಿ ಅಡುಗೆ ತಯಾರಿಸಿ ನೀಡಿ, ಅವರನ್ನು ನಮ್ಮ ಮನೆಯ ಸದಸ್ಯರಂತೆ ಪ್ರೀತಿಸಿ ಗೌರವಿಸಬೇಕು ಎಂದು ಈ ಸಂದರ್ಭದಲ್ಲಿ ಕೃಷ್ಣ ಭಟ್ ಸಾರ್ವಜನಿಕರಿಗೆ ವಿಶೇಷ ಕರೆ ನೀಡಿದರು. ‘ಕಾಯಕವೇ ಕೈಲಾಸ’ ಎಂಬ ತತ್ವದನ್ವಯ ಕಾರ್ಯನಿರ್ವಹಿಸುತ್ತಿರುವ ಮಹಾನಗರದ ಪೌರಕಾರ್ಮಿಕರ ಕಠಿಣ ಪರಿಶ್ರಮ ಮತ್ತು ಸೇವೆಯನ್ನು ಮುಖಂಡರು ಸ್ಮರಿಸಿದರು. ಅವರ ಸಂಕಷ್ಟಗಳಿಗೆ ಸ್ಪಂದಿಸಿ, ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನಾವೆಲ್ಲರೂ ಒಟ್ಟಾಗಿ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಲ್ಲರೂ ಒಗ್ಗೂಡಿ ‘ಜೈ ಶ್ರೀರಾಮ್’ ಹಾಗೂ ‘ಭಾರತ್ ಮಾತಾ ಕಿ ಜೈ’ ಎಂಬ ಉತ್ಸಾಹದ ಘೋಷಣೆಗಳನ್ನು ಮೊಳಗಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು. ಈ ವೇಳೆ ನಗರಸೇವಕಿ ರೇಷ್ಮಾ ಪಾಟೀಲ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಮತ್ತು ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
