ಬೆಳಗಾವಿಯ ಪೀರನವಾಡಿಯಲ್ಲಿ ಸಾರಿಗೆ ಬಸ್ಗಳ ಅನಿಯಮಿತ ಸಂಚಾರದಿಂದ ರೋಸಿಹೋದ ವಿದ್ಯಾರ್ಥಿಗಳು ಹಾಗೂ ಪಾಲಕರು ಇಂದು ಉಗ್ರ ಪ್ರತಿಭಟನೆಗೆ ಇಳಿದಿದ್ದಾರೆ. ಶಾಲೆ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ನಿರ್ಲಕ್ಷ್ಯ ತೋರುತ್ತಿರುವ ಸಿಬ್ಬಂದಿಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ಸಾರಿಗೆ ಬಸ್ಗಳ ಬೇಜವಾಬ್ದಾರಿ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಬೆಳಗ್ಗೆ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಶಾಲೆ ಮತ್ತು ಕಾಲೇಜುಗಳಿಗೆ ತೆರಳಬೇಕಾದ ನೂರಾರು ವಿದ್ಯಾರ್ಥಿಗಳು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯ್ದರೂ ಬಸ್ಗಳು ನಿಲ್ಲಿಸದೆ ತೆರಳುತ್ತಿರುವುದು ನಿತ್ಯದ ಗೋಳಾಗಿದೆ. ಸಂತಿಬಸ್ತವಾಡ, ರಣಕುಂಡೆ ಹಾಗೂ ಕಿಣಯೇ ಸೇರಿದಂತೆ ವಿವಿಧ ಕಡೆಗಳಿಂದ ಬರುವ ಬಸ್ಗಳು ನಿಲ್ದಾಣದ ಒಳಗೆ ಬಾರದೆ ದೂರದಲ್ಲೇ ನಿಲ್ಲುತ್ತಿರುವುದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ತಲುಪಲಾಗದೆ ಪರದಾಡುವಂತಾಗಿದೆ.
ವಿದ್ಯಾರ್ಥಿಗಳ ಈ ಶೈಕ್ಷಣಿಕ ನಷ್ಟ ಹಾಗೂ ಸಾರ್ವಜನಿಕರ ಗೋಳನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮಸ್ಥರು, ಬಸ್ಗಳನ್ನು ತಡೆದು ಚಾಲಕರು ಹಾಗೂ ನಿರ್ವಾಹಕರನ್ನು ತರಾಟೆ ತೆಗೆದುಕೊಂಡರು. ಬಸ್ಗಳಲ್ಲಿ ಸ್ಥಳೀಯ ಕೆಲಸಗಾರರು ಮತ್ತು ವಿದ್ಯಾರ್ಥಿಗಳ ದಟ್ಟಣೆ ಹೆಚ್ಚಿರುವುದರಿಂದ, ಬೆಳಿಗ್ಗೆ ಮತ್ತು ಸಂಜೆಯ ವೇಳೆ ಪೀರನವಾಡಿ ಹಾಗೂ ಹುಂಚ್ಯಾನಟ್ಟಿ ಗ್ರಾಮಗಳಿಗೆ ವಿಶೇಷ ಹಾಗೂ ಹೆಚ್ಚುವರಿ ಬಸ್ಗಳನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿಯೂ ಸಾರಿಗೆ ಇಲಾಖೆ ಹಾಗೂ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದರೆ, ಬಸ್ ತಡೆದು ಉಗ್ರ ಸ್ವರೂಪದ ರಸ್ತೆ ಬಂದ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಮತ್ತು ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಸ್ಥಳೀಯ ಶಾಸಕರು ಹಾಗೂ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ, ಸಂಚಾರ ದಟ್ಟಣೆ ನಿಯಂತ್ರಿಸಿ ಶಾಲಾ ಮಕ್ಕಳಿಗೆ ಸುರಕ್ಷಿತ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.
