ವಿಜಯಪುರ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಭವಾನಿ ನಗರದಲ್ಲಿರುವ ಅಮೃತಾ ಶ್ರೀಧರ ಜಾಧವ ಅವರ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಈ ವರ್ಷವೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಪರಿಕಲ್ಪನೆಯೊಂದಿಗೆ ಸುಂದರ ಅಲಂಕಾರ ಮಾಡಲಾಗಿದೆ.
ಭಾದ್ರಪದ ಸಪ್ತಮಿಯಂದು ಗೋಧೂಳಿ ಶುಭ ಮುಹೂರ್ತದಲ್ಲಿ ಪುಟ್ಟ ಬಾಲ ರಾಜರಾಣಿಯರೊಂದಿಗೆ ಶ್ರೀಗೌರಿ ಮಹಾಲಕ್ಷ್ಮೀ ಹಾಗೂ ಗಣೇಶ ದೇವರನ್ನು ಭಕ್ತಿಭಾವದಿಂದ ಮನೆಗೆ ಬರಮಾಡಿಕೊಳ್ಳಲಾಯಿತು. ಸಾಂಪ್ರದಾಯಿಕ ವಿಧಿವಿಧಾನದಂತೆ ಮಂಗಳಾರತಿ ನೆರವೇರಿಸಿ, ಜೋಳದ ರೊಟ್ಟಿ, ಹಸಿರು ತಪ್ಪಲು ಪಲ್ಯ, ಅನ್ನ-ಸಾರು ಸೇರಿದಂತೆ ವಿವಿಧ ಬಗೆಯ ನೈವೇದ್ಯ ಅರ್ಪಿಸಲಾಯಿತು.

ಅಲಂಕಾರದಲ್ಲಿ ಗ್ರಾಮೀಣ ಮನೆಯೊಂದಿಗೆ ಕೃಷಿ ಭೂಮಿ, ಮೊಳಕೆಯೊಡೆದ ಬೆಳೆ, ದನದ ಕೊಟ್ಟಿಗೆ, ಬಾವಿ, ನೀರು ಹೊತ್ತು ತರುವ ಮಹಿಳೆ ಹಾಗೂ ಎತ್ತುಗಳೊಂದಿಗೆ ಕೃಷಿ ಕಾಯಕಕ್ಕೆ ತೆರಳುವ ರೈತನ ದೃಶ್ಯಗಳನ್ನು ಮನಮೋಹಕವಾಗಿ ಮೂಡಿಸಲಾಗಿದೆ. ಜೊತೆಗೆ ಪಾಂಡುರಂಗನ ವಾರಕರಿಗಳು ಭಜನೆ ಮಾಡುತ್ತಾ ಪಾದಯಾತ್ರೆ ಸಾಗುತ್ತಿರುವ ಧಾರ್ಮಿಕ ರೂಪಕವೂ ವಿಶೇಷ ಆಕರ್ಷಣೆಯಾಗಿದೆ.
ಸಿಂಹ, ಆನೆ, ಬಾತುಕೋಳಿ, ಗೋಮಾತೆ ಸೇರಿದಂತೆ ವಿವಿಧ ಕಲಾಕೃತಿಗಳಿಂದ ಅಲಂಕಾರ ಮತ್ತಷ್ಟು ಕಳೆಗಟ್ಟಿದೆ. ಶ್ರೀಗೌರಿಗೆ ಹೋಳಿಗೆ, ಹುಗ್ಗಿ, ಉಂಡಿ, ಕರ್ಚಿಕಾಯಿ, ಜಿಲೇಬಿ, ಚಕ್ಕುಲಿ, ಚೂಡಾ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಿ, ಮುತ್ತೈದೆಯರಿಗೆ ಉಡಿ ತುಂಬಿ ಗೌರವಿಸಲಾಯಿತು.
ಭಕ್ತಿ, ಸಂಪ್ರದಾಯ ಮತ್ತು ಗ್ರಾಮೀಣ ಬದುಕಿನ ಸೊಗಡನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿರುವ ಈ ಅಲಂಕಾರ ಎಲ್ಲರ ಗಮನ ಸೆಳೆಯುತ್ತಿದೆ.
