ದುಶ್ಮನ್ ಕೀದರ್ ಹೈ ಅಂದ್ರೇ ಬಗಲ್ ಮೇ ಹೈ ಎನ್ನುವಂತಹ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲಿ ನಿರ್ಮಾಣವಾಗಿದ್ದು, ಯಾವಾಗ ಬೇಕಾದರೂ ಇನ್ನು 3-4 ವಿಕೇಟ್ ಬೀಳೋದು ಗ್ಯಾರಂಟಿ. ಕೇಂದ್ರದ ಸಬೂಬು ಹೇಳದೇ ರಾಜ್ಯದಲ್ಲಿ ಬರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿ ಎಂದು ಸಂಸದ ಜಗದೀಶ್ ಶೆಟ್ಟರ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಾರರೊಂದಿಗೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಅವರು ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸ್ವತಂತ್ರ್ಯ ಸಂಸ್ಥೆಯಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಹಿನ್ನಲೆಯಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರ ನಮ್ಮವರೇ ದೂರು ನೀಡಿದ್ದಾರೆಂಬ ಹೇಳಿಕೆಗೆ, ಕಾಂಗ್ರೆಸ್ಸಿನಲ್ಲಿ ದುಶ್ಮನ್ ಕೀದರ್ ಹೈ ಅಂದ್ರೇ, ಬಗಲ್ ಮೇ ಹೈ ಎನ್ನುವಂತಾಗಿದೆ. ಇನ್ನು 3-4 ವಿಕೇಟ್ ಯಾವಾಗ ಬೇಕಾದರೂ ಬೀಳಬಹುದು ಎಂದು ಭವಿಷ್ಯ ನುಡಿದರು.
ಇನ್ನು ಖಜಾನೆಯಲ್ಲಿ 1 ಪೈಸೆ ಹಣವಿಲ್ಲ. ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಬಿಲ್’ಗಳು ಬಾಕಿಯಿವೆ. ಕಳೆದ 8 ತಿಂಗಳುಗಳಿಂದ ಸರ್ಕಾರಿ ವಾಹನಗಳಿಗೆ ಪೆಟ್ರೋಲ್ ಹಾಕಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ-ಕಿತ್ತೂರು-ಧಾರವಾಡ ರೇಲ್ವೆ ಮಾರ್ಗ ಕಾಮಗಾರಿಗೆ 500 ಕೋಟಿ ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಆದರೇ ಕೇವಲ 50 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಕಾಮಗಾರಿಗೆ ಆದ್ಯತೆ ನೀಡದ ಹಿನ್ನೆಲೆ ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದ ಕೇಂದ್ರ ಸರ್ಕಾರದ ಯೋಜನೆಗೆ ವಿಳಂಬವಾಗಿದೆ. ಅಲ್ಲದೇ, ಎಲ್ಲಿಯೂ ರಸ್ತೆ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರರ 30 ಸಾವಿರಕ್ಕೂ ಹೆಚ್ಚು ಬಿಲ್ ಬಾಕಿಯಿದ್ದು, ಡಿ.ಕೆ.ಶಿವಕುಮಾರ್ ಎಷ್ಟೇ ಶೋಕೆಸ್ ಮಾಡಿದರೂ ಇದರ ಪ್ರಯೋಜನವಾಗಲ್ಲ. ಜನರು ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿಯೇ ಒಳಜಗಳ ಆರಂಭವಾಗಿದ್ದು, ಇದೊಂದು ಅಸ್ಥಿರ ಸರ್ಕಾರ ಎಂದರು.
ಯುಪಿಐ ಚಾರ್ಜ್ ಕುರಿತು ಕೇಳಿದ ಪ್ರಶ್ನೆಗೆ ಈ ಕುರಿತು ಈಗಾಗಲೇ ಚಿಂತನ-ಮಂಥನ ನಡೆಯುತ್ತಿದ್ದು, ಸರ್ಕಾರ ಎಲ್ಲವನ್ನು ವಿಚಾರ ಮಾಡಿ ಸಾರ್ವಜನಿಕ ಹಿತದೃಷ್ಠಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದರು. ಆದರೇ, ಬರ ಪರಿಸ್ಥಿತಿ ನಿರ್ವಹಣೆ ಅವರಿಂದ ಸಾಧ್ಯವಾಗುತ್ತಿಲ್ಲ. ರಾಜ್ಯದ ಸುಮಾರು 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರವಿದೆ. ಬರ ಘೋಷಣೆಯಲ್ಲಿ ತಾರತಮ್ಯ ಕಂಡು ಬರುತ್ತಿದೆ. ಕೇಂದ್ರದ ಸಬೂಬು ಹೇಳದೇ ರಾಜ್ಯದಲ್ಲಿ ಬರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿ, ಯೋಗ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದರು.
