Belagavi

ವಾರ್ಡ್‌ ನಂ. 29ರ ಕಸದ ಸಮಸ್ಯೆಗೆ ಸಿಕ್ಕ ಮುಕ್ತಿ: ನಗರಸೇವಕ ನಿತೀನ್ ಜಾಧವ್‌ ಕಾರ್ಯಕ್ಕೆ ಶ್ಲಾಘನೆ

Share

ಬೆಳಗಾವಿಯ ವಾರ್ಡ್‌ ನಂ. 29ರಲ್ಲಿ ಕಳೆದ ಹಲವು ವರ್ಷಗಳಿಂದ ಜನರನ್ನು ಕಾಡುತ್ತಿದ್ದ ಕಸದ ಸಮಸ್ಯೆಗೆ ಈಗ ಅಧಿಕೃತವಾಗಿ ತೆರೆಬಿದ್ದಿದೆ. ಶಾಲೆಯ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟುಮಾಡುತ್ತಿದ್ದ ಬ್ಲ್ಯಾಕ್‌ ಸ್ಪಾಟ್ ಅನ್ನು ತೆರವುಗೊಳಿಸುವ ಮೂಲಕ ಮಾದರಿ ವಾರ್ಡ್ ನಿರ್ಮಾಣಕ್ಕೆ ನಗರಸೇವಕ ನಿತೀನ್ ಜಾಧವ್ ಮುಂದಾಗಿದ್ದಾರೆ.

ಬೆಳಗಾವಿಯ ವಾರ್ಡ್‌ ನಂ. 29ರ 25ನೇ ನಂಬರ್ ಶಾಲೆ ಹಾಗೂ ಹಿಂದವಾಡಿ ಆರ್‌ಕೆ ಮಾರ್ಗ್ ಬಳಿಯ ಕಾರ್ನರ್‌ನಲ್ಲಿ ಕಳೆದ ಹಲವಾರು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿದ್ದ ಕಸದ ರಾಶಿ (ಬ್ಲ್ಯಾಕ್‌ ಸ್ಪಾಟ್) ಯನ್ನು ಇಂದು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಶಾಸಕರ ಮಾರ್ಗದರ್ಶನದಂತೆ ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ವಾರ್ಡ್‌ನಲ್ಲಿ ಬರೋಬ್ಬರಿ 22 ಕಸದ ತಾಣಗಳನ್ನು ನಿರ್ಮೂಲನೆ ಮಾಡಲಾಗಿದ್ದು, ವಾರ್ಡ್ ಅನ್ನು ಸಂಪೂರ್ಣ ಬ್ಲ್ಯಾಕ್‌ ಸ್ಪಾಟ್ ಮುಕ್ತವನ್ನಾಗಿ ಮಾಡಲಾಗಿದೆ ಎಂದು ನಗರಸೇವಕ ನಿತೀನ್ ಜಾಧವ್ ಅವರು ತಿಳಿಸಿದ್ದಾರೆ. ಜನರು ತಮ್ಮ ಮನೆಯ ಮುಂದಿನ ಸ್ವಚ್ಛತೆಯನ್ನು ಕಾಪಾಡಿಕೊಂಡು, ಶಾಲೆಗಳ ಬಳಿ ಕಸ ಎಸೆಯುತ್ತಿರುವುದರಿಂದ ಶಾಲಾ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದರು.ಮುಂದಿನ ದಿನಗಳಲ್ಲಿ ಸಾರ್ವಜನಿಕರು ಶಾಲೆಗಳ ಅಥವಾ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆದರೆ ಕಠಿಣ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ, ಮಾರ್ನಿಂಗ್ ವಾಕರ್ಸ್ ಹಾಗೂ ಹಿರಿಯ ನಾಗರಿಕರ ವಿಶ್ರಾಂತಿಗಾಗಿ ವಾರ್ಡ್‌ನಲ್ಲಿ ಈಗಾಗಲೇ ಸುಮಾರು 25 ಬೆಂಚ್‌ಗಳನ್ನು ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ದೇವಸ್ಥಾನಗಳ ಆವರಣ ಹಾಗೂ ವಾರ್ಡ್‌ನ ವಿವಿಧ ಪ್ರಮುಖ ಸ್ಥಳಗಳಲ್ಲೂ ಸಹ ಇಂತಹ ಬೆಂಚ್‌ಗಳನ್ನು ಅಳವಡಿಸುವ ಯೋಜನೆ ಇದೆ ಎಂದು ನಿತಿನ್ ಜಾಧವ್ ಸ್ಪಷ್ಟಪಡಿಸಿದ್ದಾರೆ.

ಈ ವೇಳೆ ಅರ್ಜುನ ಬಢಿವಾಲಿ, ಭರಮಗೌಡ ಪಾಟೀಲ್, ಪ್ರಮೋದ್ ಪಾಟೀಲ್, ರತನ್ ದೇಸಾಯಿ, ಪೂರ್ಣಿಮಾ ಮೋತಿಕರ, ಶೋಭಾ ಪವಾರ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!