Vijaypura

ಗಣೇಶ ಮಂಟಪಕ್ಕೆ ನುಗ್ಗಿದ ನಾಲ್ವರು ಕಳ್ಳರು..! ₹2.5 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಕಳವಿಗೆ ಯತ್ನ

Share

ಗಣೇಶ ಮಂಟಪದಲ್ಲಿ ಬೆಳ್ಳಿ ಆಭರಣಗಳ ಕಳ್ಳತನಕ್ಕೆ ಕಳ್ಳರು ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ಗೋಳಗುಮ್ಮಟ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶ ಮೂರ್ತಿಯ ಮಂಟಪಕ್ಕೆ ತಡರಾತ್ರಿ ನಾಲ್ವರು ಕಳ್ಳರು ನುಗ್ಗಿದ್ದಾರೆ. ಗಣೇಶ ಮೂರ್ತಿಗೆ ಹಾಕಲಾಗಿದ್ದ ಬೆಳ್ಳಿ ಹಾರ, ಬೆಳ್ಳಿ ಸರ, ಕೈಕವಚ, ಸೊಂಡಿಲು ಕವಚ ಹಾಗೂ ಕಿವಿಯ ಆಭರಣಗಳನ್ನು ಕಳವು ಮಾಡಲು ಕಳ್ಳರು ಯತ್ನಿಸಿದ್ದಾರೆ. ಸುಮಾರು ಎರಡೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ, ಅರ್ಧ ಕೆ.ಜಿಗೂ ಹೆಚ್ಚು ತೂಕದ ಬೆಳ್ಳಿ ಆಭರಣಗಳನ್ನೇ ಕಳ್ಳರು ಟಾರ್ಗೆಟ್ ಮಾಡಿದ್ದಾರೆ. ರಾತ್ರಿ ಗಣೇಶ ಮಂಟಪಕ್ಕೆ ಪರದೆ ಹಾಕಿ ಕಾರ್ಯಕರ್ತರು ತೆರಳಿದ್ದರು. ಇದೇ ಅವಕಾಶ ಬಳಸಿಕೊಂಡ ಕಳ್ಳರು ತಡರಾತ್ರಿ ಮಂಟಪದ ಪರದೆ ತೆರೆದು ಗಣೇಶನ ಮೈಮೇಲಿದ್ದ ಬೆಳ್ಳಿ ಒಡವೆಗಳನ್ನು ದೋಚಲು ಯತ್ನಿಸಿದ್ದಾರೆ.

ಆದ್ರೆ… ಕಳ್ಳರ ಹಲ್‌ಚಲ್ ಕಂಡು ನಾಯಿಗಳು ಜೋರಾಗಿ ಬೊಗಳಿವೆ. ನಾಯಿಗಳ ಕೂಗಾಟ ಕೇಳಿ ಎಚ್ಚೆತ್ತ ಮಹಿಳೆಯೊಬ್ಬರು ಹೊರಗೆ ಬಂದಿದ್ದಾರೆ. ಕಳ್ಳರನ್ನು ಕಂಡು ಭಯಭೀತರಾದ ಮಹಿಳೆ ಜೋರಾಗಿ ಕೂಗಿದ್ದಾರೆ. ಮಹಿಳೆಯ ಕೂಗಾಟದಿಂದ ಎಚ್ಚೆತ್ತ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇನ್ನು ಕಳ್ಳರು ಓಡಿ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ಭಕ್ತರು ಚಿನ್ನ, ಬೆಳ್ಳಿ ಆಭರಣಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಪ್ರತಿವರ್ಷ ಗಣೇಶ ಮಂಡಳಿಗಳ ಮುಖಂಡರು ಗಣೇಶನಿಗೆ ಬೆಲೆಬಾಳುವ ಆಭರಣಗಳನ್ನು ಹಾಕುತ್ತಾರೆ.

ಆದರೆ ಇದೀಗ ಮಂಟಪಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿರು ವುದರಿಂದ ಗಣೇಶ ಮಂಡಳಿಗಳಲ್ಲಿ ಆತಂಕ ಶುರುವಾಗಿದೆ. ರಾತ್ರಿ ವೇಳೆ ಮಂಟಪಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳಿರುವಾಗ ಕಳ್ಳತನವಾದರೆ ಹೊಣೆ ಯಾರು ಎಂಬ ಪ್ರಶ್ನೆಯನ್ನೂ ಮಂಡಳಿಗಳ ಮುಖಂಡರು ಮುಂದಿಟ್ಟಿದ್ದಾರೆ.
ಹೀಗಾಗಿ ನಗರದ ಎಲ್ಲಾ ಸಾರ್ವಜನಿಕ ಗಣೇಶ ಮಂಟಪಗಳಿಗೂ ಸೂಕ್ತ ಭದ್ರತೆ ಒದಗಿಸಬೇಕು. ಕನಿಷ್ಠ ಗಣೇಶ ಮಂಟಪಗಳ ಎದುರು ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಬೇಕು ಎಂದು ಗಣೇಶ ಮಂಡಳಿಗಳ ಮುಖಂಡರು ಆಗ್ರಹಿಸಿದ್ದಾರೆ.

Tags:

error: Content is protected !!