Belagavi

ನಂದಿನಿ ಹಾಲಿನ ದರ ಏರಿಕೆ ಕುರಿತು ಶೀಘ್ರವೇ ಅಂತಿಮ ನಿರ್ಧಾರ: ಸಹಕಾರ ಸಚಿವ ಲಕ್ಷ್ಮಣ ಸವದಿ!

Share

ಒಕ್ಕೂಟದವರು 8 ರಿಂದ 10 ರೂಪಾಯಿಗಳಷ್ಟು ದರ ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ಗಂಭೀರ ಸಭೆ ನಡೆದಿದೆ ಎಂದರು. ಗ್ರಾಹಕರು, ಹಾಲು ಉತ್ಪಾದಕರು ಹಾಗೂ ಸಂಘ-ಸಂಸ್ಥೆಗಳ ಹಿತಾಸಕ್ತಿಯನ್ನು ಸಮತೋಲನದಲ್ಲಿಟ್ಟುಕೊಂಡು ಮುಂದಿನ 4-5 ದಿನಗಳಲ್ಲಿ ಸೂಕ್ತ ದರವನ್ನು ನಿಗದಿಪಡಿಸಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ಹೇಳಿದರು.

ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಸಚಿವ ಲಕ್ಷ್ಮಣ ಸವದಿ, ಇಲಾಖೆಯನ್ನು ಮತ್ತಷ್ಟು ಸದೃಢ ಮತ್ತು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕವೇ ಅಗ್ರಗಣ್ಯವಾಗಿದ್ದು, ಸುಮಾರು 32 ಲಕ್ಷ ಕುಟುಂಬಗಳಿಗೆ ಇದರಿಂದ ನೆರವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹಾಲಿನ ಪ್ರೋತ್ಸಾಹ ಧನವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.

ಇಡಿ ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇಡಿ ದಾಳಿಗಳು ಹೆಚ್ಚಾಗಿ ವಿರೋಧ ಪಕ್ಷದವರ ಮೇಲೆಯೇ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು. ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರು ಯಾವ ಸಂದರ್ಭದಲ್ಲಿ ಆ ಮಾತುಗಳನ್ನಾಡಿದ್ದಾರೆ ಎಂಬುದು ತಮಗೆ ತಿಳಿದಿಲ್ಲ, ಅವರೇ ಅದಕ್ಕೆ ಸ್ಪಷ್ಟನೆ ನೀಡಬೇಕು ಎಂದರು. ಇನ್ನು ಶಾಸಕರ ಕುರಿತಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ಬೆಂಗಳೂರಿನ ದಟ್ಟಣೆಯ ಕುರಿತು ಜನರೂಢಿಯಲ್ಲಿ ಬಂದ ಮಾತಾಗಿದ್ದು, ತಪ್ಪು ಮಾಡಿದವರಷ್ಟೇ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಚಿವರು ವಿನೂತನ ಯೋಜನೆಯನ್ನು ಪ್ರಕಟಿಸಿದ್ದಾರೆ. ಬಿಬಿಎ, ಎಮ್‌ಬಿಎ ಹಾಗೂ ಬಿಕಾಂ ಪದವೀಧರರಿಗೆ ವಿಶೇಷ 6 ತಿಂಗಳ ತರಬೇತಿ ನೀಡಿ, ಕಂದಾಯ ಇಲಾಖೆಯ ಮಾದರಿಯಲ್ಲಿ ರಾಜ್ಯದ ಪ್ರತಿ ಸಹಕಾರಿ ಸಂಘ-ಸಂಸ್ಥೆಗಳ ಆಡಿಟ್ (ಲೆಕ್ಕಪರಿಶೋಧನೆ) ಮಾಡಿಸಲಾಗುವುದು ಎಂದರು. ಇದರೊಂದಿಗೆ ಸಂಘ-ಸಂಸ್ಥೆಗಳ ವ್ಯಾಪಾರ ವಹಿವಾಟು ಹಾಗೂ ಸಂಪೂರ್ಣ ಮಾಹಿತಿಯನ್ನು ಕ್ಯೂಆರ್ ಕೋಡ್ (QR Code) ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ, ಸಂಸ್ಥೆಗಳ ಎದುರೇ ಅದನ್ನು ಅಂಟಿಸುವ ಕ್ರಾಂತಿಕಾರಿ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ನಂದಿನಿ ಹಾಲಿನ ದರ ಏರಿಕೆ ಕುರಿತು ಮಾತನಾಡಿರುವ ಸಚಿವರು, ಒಕ್ಕೂಟದವರು 8 ರಿಂದ 10 ರೂಪಾಯಿಗಳಷ್ಟು ದರ ಹೆಚ್ಚಿಸುವಂತೆ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ಗಂಭೀರ ಸಭೆ ನಡೆದಿದೆ ಎಂದರು. ಗ್ರಾಹಕರು, ಹಾಲು ಉತ್ಪಾದಕರು ಹಾಗೂ ಸಂಘ-ಸಂಸ್ಥೆಗಳ ಹಿತಾಸಕ್ತಿಯನ್ನು ಸಮತೋಲನದಲ್ಲಿಟ್ಟುಕೊಂಡು ಮುಂದಿನ 4-5 ದಿನಗಳಲ್ಲಿ ಸೂಕ್ತ ದರವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ಕಬ್ಬಿಗೆ ಎಫ್‌ಆರ್‌ಪಿ ಮತ್ತು ಎಮ್‌ಎಸ್‌ಪಿ ನಿಗದಿಪಡಿಸುವ ಸಂದರ್ಭದಲ್ಲಿ ಕೃಷಿಕರು, ಸಕ್ಕರೆ ಕಾರ್ಖಾನೆಗಳು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡ್ಡಾಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದರು.

Tags:

error: Content is protected !!