State

ಕಸ್ತೂರಿ ರಂಗನ್ ವರದಿಯ ಕುರಿತು ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಸಮಗ್ರ ಚರ್ಚೆ; ಸಿಎಂ ಡಿ.ಕೆ.ಶಿವಕುಮಾರ್

Share

ರೈತರನ್ನು ಉಳಿಸಬೇಕೆಂಬ ಉದ್ದೇಶದಿಂದ ರೈತರ ಬಳಿಯೇ ಬಂದಿದ್ದೇನೆ. ಕಸ್ತೂರಿ ರಂಗನ್ ವರದಿ ವಿಚಾರವಾಗಿ ಶಾಸಕರು ಮತ್ತು ಸಂಸತ್ ಸದಸ್ಯರ ಅಭಿಪ್ರಾಯಗಳನ್ನು ಪಡೆಯಲು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸೋಮವಾರ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಶಾಲಾ ಮೈದಾನಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮನ್ನು ಭೇಟಿ ಮಾಡಲು ಇದೊಂದು ವಿಶೇಷವಾದ ಅವಕಾಶ. ನಿಮ್ಮನ್ನು ಭೇಟಿ ಮಾಡುವ ಅವಕಾಶದ ಜೊತೆಗೆ ಅಪಾಯವೂ ಇದೆ. ಅಪಾಯವನ್ನು ಕಡಿಮೆ ಮಾಡಲು ಬಂದಿದ್ದೇನೆ. ಕೊನೆಗೆ ಭೂಮಿ ರಕ್ಷಣೆ ಮಾಡಬೇಕು. ನಮಗೂ ಭೂಮಿಗೂ ನಂಟಿದೆ. ಕೇಂದ್ರ ಸರ್ಕಾರ ತಂದಿರುವ ವರದಿಯನ್ನು ವಾಪಸ್ ಕಳುಹಿಸುತ್ತಿದ್ದೇವೆ. ಆದರೆ ಕ್ಯಾಬಿನೇಟ್ ಮಿಟಿಂಗ್ ಮಾಡಬಹುದಾಗಿತ್ತು. ಅಲ್ಲದೇ ನಾನೇ ತೀರ್ಮಾನ ಮಾಡಬಹುದಾಗಿತ್ತು. ಇದಕ್ಕಾಗಿ ನಿಮ್ಮ ಜನಪ್ರತಿನಿಧಿಗಳ ಸಭೆ ಅಧಿವೇಶನ ಕರೆದಿದ್ದೇನೆ. ರೈತರನ್ನು ಉಳಿಸಲು ನಿಮ್ಮ ಬಳಿಗೆ ಬಂದಿದ್ದೇವೆ ಎಂದು ಹೇಳಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, ಕಸ್ತೂರಿ ರಂಗನ್ ವರದಿಯ ಕುರಿತು ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಲಾಗುವುದು. ಹಿಂದಿನ ನಮ್ಮ ಸರ್ಕಾರವೇ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದೆ. 27ನೇ ತಾರೀಕಿನೊಳಗೆ ನಮ್ಮ ಆಕ್ಷೇಪಣೆಯನ್ನು ಸಲ್ಲಿಸಬೇಕಾಗಿದೆ. ಕೇವಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಷ್ಟೇ ಅಲ್ಲದೆ, ಸಾರ್ವಜನಿಕರ ಜೊತೆಗೂ ಚರ್ಚೆ ಮಾಡಬೇಕು ಎನ್ನುವುದು ನಮ್ಮ ಆಸೆ. ಶಾಸಕರು ಮತ್ತು ಸಂಸತ್ ಸದಸ್ಯರ ಅಭಿಪ್ರಾಯಗಳನ್ನು ಪಡೆಯಲು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಸೋಮವಾರ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.


ಇನ್ನು ಬರಗಾಲದಿಂದ ತೊಂದರೆಗೀಡಾದ ರೈತರು, ಹೋರಾಟಗಾರರು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಆಲಿಸಿ, ಎಲ್ಲರಿಗೂ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ. ರೈತರ ಹಿತರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ಯಾರೂ ತೊಂದರೆ ಅನುಭವಿಸದಂತೆ ನೋಡಿಕೊಳ್ಳಲು ತಾವೂ ಹಾಗೂ ಅರಣ್ಯ ಸಚಿವರು ಪ್ರವಾಸ ಮಾಡುತ್ತಿದ್ದೇವೆ ಎಂದರು.

ಈ ವೇಳೆ ಸಚಿವರಾದ ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಸಂಸದ ಬಿ ವೈ ರಾಘವೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ, ಆರಗ ಜ್ಞಾನೇಂದ್ರ, ಶಾರದ ಪೂರ್ಯನಾಯ್ಕ್, ಎಸ್ ಎನ್ ಚನ್ನಬಸಪ್ಪ, ಪರಿಷತ್ ಸದಸ್ಯರಾದ ಬಲ್ಕಿಸ್ ಬಾನು, ಧನಂಜಯ್ ಸರ್ಜಿ, ಡಿ ಎಸ್ ಅರುಣ್ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಂಜುನಾಥ ಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರ ಅಧ್ಯಕ್ಷ ಅಂಶುಂಮನ್, ಸೂಡಾ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ ಎಸ್ ಚಂದ್ರಭೂಪಾಲ, ಶ್ರೀನಿವಾಸನ್ ಕರಿಯಣ್ಣ, ಆರ್ ಪ್ರಸನ್ನ ಕುಮಾರ್, ಹೆಚ್ ಪಿ ಯೋಗೀಶ್, ಎಂ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Tags:

error: Content is protected !!