State

ಮಂಗಳೂರು ಬಂದರಿಗೆ ಸಿಎಂ ದಿಢೀರ್ ಭೇಟಿ: ವ್ಯಾಪಾರ ಬಂದ್ ಮಾಡಿದ ಅಧಿಕಾರಿಗಳಿಗೆ ಅಮಾನತು ಎಚ್ಚರಿಕೆ!

Share

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ 6 ಗಂಟೆಗೆ ಸಚಿವ ಯು.ಟಿ. ಖಾದರ್ ಹಾಗೂ ಅಧಿಕಾರಿಗಳೊಂದಿಗೆ ನಗರದ ಮೀನುಗಾರಿಕಾ ಧಕ್ಕೆ ಬಂದರಿಗೆ ಮತ್ತು ಅಳಿವೆಬಾಗಿಲಿಗೆ ದಿಢೀರ್ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದರು.

ಖುದ್ದು ಬೋಟ್ ಹತ್ತಿ ಸಮುದ್ರ ಮತ್ತು ಅಳಿವೆಬಾಗಿಲಿಗೆ ತೆರಳಿದ ಅವರು, ಇತ್ತೀಚೆಗೆ ಹೂಳು ತುಂಬಿ ಬೋಟ್ ಮುಳುಗಡೆಯಾಗಿದ್ದ ದುರಂತ ಸ್ಥಳವನ್ನು ವೀಕ್ಷಿಸಿದರು. ಬಳಿಕ ಧಕ್ಕೆಯ ಜೆಟ್ಟಿ ಬಳಿ ಇಂಜಿನಿಯರ್‌ಗಳು ಹಾಗೂ ಬಂದರು ಇಲಾಖಾ ಅಧಿಕಾರಿಗಳು ಬಿಡಿಸಿ ತೋರಿಸಿದ ನೀಲನಕ್ಷೆಯನ್ನು (ಬ್ಲೂಪ್ರಿಂಟ್) ಕೂಲಂಕಷವಾಗಿ ಪರಿಶೀಲಿಸಿ, ಧಕ್ಕೆ ವಿಸ್ತರಣೆ ಮತ್ತು ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಇದೇ ಸಂದರ್ಭದಲ್ಲಿ ಮೀನು ಮಾರುಕಟ್ಟೆಗೂ ಭೇಟಿ ನೀಡಿದ ಮುಖ್ಯಮಂತ್ರಿಗಳು, ಸ್ಥಳೀಯ ಮೀನುಗಾರರು ಹಿಡಿದು ತಂದಿದ್ದ ಬೃಹತ್ ಗಾತ್ರದ ಅಂಜಲ್ (ಸುರ್ಮೆ) ಮೀನುಗಳನ್ನು ಕೈಯಲ್ಲಿ ಹಿಡಿದು ಪರಿಶೀಲಿಸಿ, ವ್ಯಾಪಾರಸ್ಥರ ಯೋಗಕ್ಷೇಮ ವಿಚಾರಿಸಿದರು. ಆದರೆ, ತಮ್ಮ ಭೇಟಿಯ ಹಿನ್ನೆಲೆಯಲ್ಲಿ ಧಕ್ಕೆಯ ದೈನಂದಿನ ಮೀನು ಮಾರಾಟ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಮ್ಮ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ನಾನು ಇಲ್ಲಿಗೆ ಬರುವ ಸಮಯಕ್ಕೆ ಅಧಿಕಾರಿಗಳು ಅಥವಾ ಪೊಲೀಸರು ಇಡೀ ಧಕ್ಕೆಯ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ. ಇದರ ಬಗ್ಗೆ ನನಗೆ ಕಿಂಚಿತ್ತೂ ಸಮಾಧಾನವಿಲ್ಲ. ನಾನು ಬಂದಿದ್ದೇ ಇಲ್ಲಿನ ವಾಸ್ತವ ವಹಿವಾಟು, ಜನರ ನೈಜ ಸಮಸ್ಯೆ ಮತ್ತು ತೊಂದರೆಗಳನ್ನು ಕಣ್ಣಾರೆ ನೋಡಲು. ನನಗೆ ಯಾವುದೇ ಸೆಕ್ಯೂರಿಟಿ ಅಗತ್ಯವಿಲ್ಲ. ವ್ಯಾಪಾರ ನಿಲ್ಲಿಸಿದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಂದ ವರದಿ ಕೇಳಿದ್ದು, ಇದರಲ್ಲಿ ನಮ್ಮ ಅಧಿಕಾರಿಗಳು ಯಾರೇ ಭಾಗಿಯಾಗಿದ್ದರೂ ಅವರನ್ನು ಇಂದೇ ಅಮಾನತು ಮಾಡುತ್ತೇವೆ. ವ್ಯಾಪಾರ-ವಹಿವಾಟು ಎಂದಿನಂತೆ ನಿರಂತರವಾಗಿ ನಡೆಯಬೇಕು” ಎಂದರು.

“ಕರಾವಳಿಯ ಮೀನುಗಾರಿಕೆಯನ್ನು ಬಲಪಡಿಸಲು ಮಂಗಳೂರಿನ ಫಿಶರೀಸ್ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಿ, ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು 200 ಸೀಟುಗಳಿಗೆ ಹೆಚ್ಚಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ಮತ್ತು ಬ್ಲೂ ಎಕಾನಮಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹೊಸ ನೀತಿಗಳನ್ನು ರೂಪಿಸಲಾಗಿದ್ದು, ಕರಾವಳಿಯ ಆರ್ಥಿಕ ಪ್ರಗತಿಗೆ ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದರು.
“ಕಸ್ತೂರಿ ರಂಗನ್ ವರದಿಯಿಂದ ನಮ್ಮ ಮಲೆನಾಡು ಮತ್ತು ಕರಾವಳಿಯ ಜನರಿಗೆ ಅನ್ಯಾಯವಾಗುತ್ತಿದೆ. ಈ ಸಂಬಂಧ ಸೋಮವಾರ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆದಿದ್ದು, ವಾಸ್ತವಾಂಶಗಳನ್ನು ಮುಂದಿಟ್ಟು ಜನರ ಬದುಕನ್ನು ರಕ್ಷಿಸಲು ಕಾನೂನು ಚೌಕಟ್ಟಿನಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

Tags:

error: Content is protected !!