ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ ವತಿಯಿಂದ ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್-2027’ ಅಂಗವಾಗಿ ಜಿಲ್ಲೆಯ 15 ರಿಂದ 29 ವರ್ಷದೊಳಗಿನ ಯುವಜನರಿಗಾಗಿ ಆನ್‌ಲೈನ್ ವಿಕಸಿತ ಭಾರತ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮೈ ಭಾರತ ಬೆಳಗಾವಿ ಅಧಿಕಾರಿ ಸಂಗ್ರಾಮ ಸಾವಂತ್ ಹೇಳಿದರು.

ಗುರುವಾರ ಬೆಳಗಾವಿ ವಾರ್ತಾ ಇಲಾಖೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ವಿಕಸಿತ ಭಾರತ 2047’ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯುವ ಸಮುದಾಯವನ್ನು ಪ್ರೇರೇಪಿಸುವುದು ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಯುವಜನರ ಆಲೋಚನೆಗಳು ಮತ್ತು ನವೀನ ಪರಿಕಲ್ಪನೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು. ಬಹುಭಾಷಾ ಆನ್‌ಲೈನ್ ರಸಪ್ರಶ್ನೆಯಲ್ಲಿ ಯುವಜನರು ಮೈ ಭಾರತ ಅಧಿಕೃತ ಪೋರ್ಟಲ್ ಮೂಲಕ ಭಾಗವಹಿಸಬಹುದಾಗಿದೆ. ಸೆ.17ರಿಂದ ಆರಂಭವಾಗಿರುವ ಸ್ಪರ್ಧೆ ಸೆ.20 ರವರೆಗೆ ನಡೆಯಲಿದೆ. ವಿಕಸಿತ ಭಾರತ ಚಾಲೆಂಜ್, ಸಾಂಸ್ಕೃತಿಕ ಟ್ರ್ಯಾಕ್, ಭಾರತಕ್ಕಾಗಿ ವಿನ್ಯಾಸ, ಸಾಮಾಜಿಕ ಕಾರಣಕ್ಕಾಗಿ ಹ್ಯಾಕ್, ಯುವ ಉದ್ಯಮಿಗಳ ಸವಾಲು ಹಾಗೂ ಯುವ ಸಂಸತ್ತು ಸೇರಿದಂತೆ ಆರು ಪ್ರಮುಖ ಟ್ರ್ಯಾಕ್‌ಗಳನ್ನು ಕಾರ್ಯಕ್ರಮದಲ್ಲಿ ರೂಪಿಸಲಾಗಿದೆ ಎಂದರು.
ವಿಕಸಿತ ಭಾರತ ಚಾಲೆಂಜ್ ಪ್ರಮುಖ ಟ್ರ್ಯಾಕ್ ಆಗಿದ್ದು, ರಸಪ್ರಶ್ನೆ, ಪ್ರಬಂಧ, ಜಿಲ್ಲಾ ಚಾಂಪಿಯನ್‌ಶಿಪ್ ಸೇರಿದಂತೆ ವಿವಿಧ ಹಂತಗಳ ಮೂಲಕ ರಾಷ್ಟ್ರೀಯ ಮಟ್ಟದ VBYLD ಕಾರ್ಯಕ್ರಮಕ್ಕೆ ಅರ್ಹತೆ ಪಡೆಯುವ ಅವಕಾಶ ಯುವಜನರಿಗೆ ದೊರೆಯಲಿದೆ. VBYLD-2027ರ ವಿಶೇಷತೆಯಾಗಿ ದೇಶವನ್ನು 10 ಪ್ರದೇಶಗಳಾಗಿ ವಿಂಗಡಿಸಿ, ಆಡಳಿತ, ಹವಾಮಾನ ಭದ್ರತೆ, ಉದ್ಯಮಶೀಲತೆ, ನಾವೀನ್ಯತೆ, ತಂತ್ರಜ್ಞಾನ, ಮಾನವ ಬಂಡವಾಳ ಹಾಗೂ ನೀಲಿ ಆರ್ಥಿಕತೆ ಸೇರಿದಂತೆ ವಿವಿಧ ಅಭಿವೃದ್ಧಿ ಆದ್ಯತೆಗಳಿಗೆ ಒತ್ತು ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಯುವಜನರು ತಮ್ಮ ಪ್ರತಿಭೆ ಪ್ರದರ್ಶಿಸಲು, ನವೀನ ಪರಿಹಾರಗಳನ್ನು ರೂಪಿಸಲು ಹಾಗೂ ವಿಕಸಿತ ಭಾರತ@2047ರ ದೃಷ್ಟಿಕೋನಕ್ಕೆ ತಮ್ಮ ಆಲೋಚನೆಗಳನ್ನು ಕೊಡುಗೆಯಾಗಿ ನೀಡಲು ಇದು ಉತ್ತಮ ವೇದಿಕೆಯಾಗಿದೆ. 15ರಿಂದ 29 ವರ್ಷದೊಳಗಿನ ಎಲ್ಲ ಅರ್ಹ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
