ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಜಿಲ್ಲೆಯಲ್ಲಿ ಜಾರಿಯಾಗುತ್ತಿರುವ ನೋಟಿಸ್ಗಳಿಂದ ಹೊರನಾಡು ಹಾಗೂ ವಿದೇಶಗಳಲ್ಲಿರುವ ಮತದಾರರಿಗೆ ಎದುರಾಗಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನೋಟಿಸ್ ಅವಧಿ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಮುಖ್ಯ ಚುನಾವಣಾ ಅಧಿಕಾರಿಯವರೊಂದಿಗೆ ಚರ್ಚಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಹೊರಬರುವ ಭರವಸೆಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೀಡಿದ್ದಾರೆ.

ಇಂದು ಬೆಳಗಾವಿಯಲ್ಲಿ ಅವರು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಒಟ್ಟು 84,000 ನೋಟಿಸ್ಗಳನ್ನು ಜಾರಿಗೊಳಿಸುವ ಗುರಿಯಿದ್ದು, ಈವರೆಗೆ 60,000 ನೋಟಿಸ್ಗಳನ್ನು ಯಶಸ್ವಿಯಾಗಿ ತಲುಪಿಸಲಾಗಿದೆ. ನೋಟಿಸ್ ಪಡೆದವರಿಗೆ ಕನಿಷ್ಠ 7 ದಿನಗಳ ಕಾಲಾವಕಾಶ ಕಡ್ಡಾಯವಾಗಿದ್ದರೂ, ಮುಂಬೈ, ಪುಣೆ ಹಾಗೂ ಬೆಂಗಳೂರಿನಂತಹ ಹೊರೂರುಗಳಲ್ಲಿ ನೆಲೆಸಿರುವವರಿಗೆ ಯಾವುದೇ ಅಡಚಣೆಯಾಗದಂತೆ ಅವರ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿಪಡಿಸಲು ಬಿ.ಎಲ್.ಒ. (BLO) ಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಗರ್ಭಿಣಿಯರು, ಬಾಣಂತಿಯರು, ಸೈನಿಕರು ಹಾಗೂ ಅಮೆರಿಕ, ಲಂಡನ್ ಸೇರಿದಂತೆ ವಿದೇಶಗಳಲ್ಲಿ ವೀಸಾ ಸಮಸ್ಯೆಯಿಂದ ವಾಸವಿರುವವರ ವೈಯಕ್ತಿಕ ಕಷ್ಟಗಳನ್ನು ಪರಿಗಣಿಸಲು ಸಿ.ಇ.ಒ. ಅವರ ಗಮನಕ್ಕೆ ತರಲಾಗಿದೆ. ಸಾರ್ವಜನಿಕರಿಗೆ ಅನಾನುಕೂಲವಾಗದ ರೀತಿಯಲ್ಲಿ ವಿನಾಯಿತಿ ಹಾಗೂ ಸರಳೀಕರಣದ ಹೊಸ ಆದೇಶಗಳು ಶೀಘ್ರದಲ್ಲೇ ಹೊರಡಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
