ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವನ್ನು ಪಾಸ್ ಮಾಡದ ಮಹಾನಗರ ಪಾಲಿಕೆಯ ಧೋರಣೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಬೆಳಗಾವಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕರವೇ ಜಿಲ್ಲಾಧ್ಯಕ್ಷ ಅಭಿಲಾಶ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಬೃಹತ್ ಪ್ರತಿಭಟನೆ ನಡೆಸಿ, ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆ ವೇಳೆ ಆಕ್ರೋಶಗೊಂಡ ಕಾರ್ಯಕರ್ತರು ಪಾಲಿಕೆಯ ಮುಖ್ಯ ಗೇಟ್ ಏರಿ ಒಳಗೆ ನುಗ್ಗಲು ಯತ್ನಿಸಿದಾಗ, ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಕನ್ನಡಿಗರ ಸ್ವತ್ತು ಎಂಬುದನ್ನು ಘೋಷಿಸಿ ಠರಾವು ಪಾಸ್ ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಕನ್ನಡ ಪರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಹಾಲಿ ಮಹಾನಗರ ಪಾಲಿಕೆಯನ್ನು ತಕ್ಷಣವೇ ಸೂಪರ್‌ಸೀಡ್ ಮಾಡಿ, ಹೊಸದಾಗಿ ಚುನಾವಣೆ ನಡೆಸಿ ಕನ್ನಡ ಪರವಾದ ಆಡಳಿತ ಮಂಡಳಿಯನ್ನು ರಚಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್ ಒತ್ತಾಯಿಸಿದ್ದಾರೆ. ಪಾಲಿಕೆಯನ್ನು ಸೂಪರ್‌ಸೀಡ್ ಮಾಡಲು ಪ್ರಾದೇಶಿಕ ಆಯುಕ್ತರು ನೀಡಿರುವ ನೋಟಿಸ್ ಮತ್ತು ವರದಿ ಸೂಚನೆಯನ್ನು ಅಭಿನಂದಿಸಿರುವ ಅವರು, ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಒಂದು ವಾರದಲ್ಲಿ ಬೃಹತ್ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಭಾಗಿಯಾಗಿದ್ಧರು.
