Chikkodi

ಪ್ರೇಮ ನಿರಾಕರಿಸಿದ ಹಿನ್ನೆಲೆ ಬಾಲಕಿಯ ಭೀಕರ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಚಿಕ್ಕೋಡಿ ನ್ಯಾಯಾಲಯ

Share

ಪ್ರೇಮವನ್ನು ನಿರಾಕರಿಸಿದ ಕಾರಣಕ್ಕೆ ನನಗೆ ಸಿಗದವಳು ಬೇರೆಯವರಿಗೂ ಸಿಗಬಾರದು ಎಂಬ ಕ್ರೂರ ಮನಸ್ಥಿತಿಯಿಂದ ಅಪ್ರಾಪ್ತ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಅಥಣಿ ತಾಲೂಕಿನ ನಾಗನೂರು ಪಿ.ಕೆ. ಮೂಲದ, ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಕೃಷಿ ಕೂಲಿ ಮಾಡುತ್ತಿದ್ದ ಶೇಖರ್ ರುದ್ರನವರ ಅವರ 16 ವರ್ಷದ ಮಗಳು ಲಕ್ಷ್ಮೀ ಶಿಕ್ಷೆಗೆ ಒಳಗಾದ ಅಮೀರ್ ಲಾಲ್ಸಾಬ್ ಜಮಾದಾರ್ (26) ಎಂಬಾತನಿಂದ ಕೊಲೆಯಾದ ದುರದೃಷ್ಟಕರ ಬಾಲಕಿ. ನ್ಯಾಯಾಧೀಶರಾದ ವಿಜಯಕುಮಾರ್ ಅವರು ಈ ತೀರ್ಪನ್ನು ನೀಡಿದ್ದು, ಸರ್ಕಾರಿ ಅಭಿಯೋಜಕರಾದ (ವಕೀಲರು) ವೈ. ಜಿ. ತುಂಗಳ್ ಅವರು ಪ್ರಾಸಿಕ್ಯೂಷನ್ ಪರವಾಗಿ ಯಶಸ್ವಿಯಾಗಿ ವಾದ ಮಂಡಿಸಿದ್ದರು.

2021ರ ಆಗಸ್ಟ್ 1 ರಂದು 9ನೇ ತರಗತಿ ಓದುತ್ತಿದ್ದ ಲಕ್ಷ್ಮಿ ತನ್ನ ತಂಗಿಯರು ಮತ್ತು ಗೆಳತಿಯರೊಂದಿಗೆ ಹಾರೂಗೇರಿ ಸಮೀಪದ ಕರಿಸಿದ್ಧೇಶ್ವರ ಜಾತ್ರೆಗೆ ತೆರಳಿದ್ದಳು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಅಮೀರ್, ಪ್ರೀತಿಸುವಂತೆ ಒತ್ತಾಯಿಸಿ ಜಗಳ ತೆಗೆದಿದ್ದನು. ಬಾಲಕಿ ನಿರಾಕರಿಸಿದಾಗ ಕೋಪಗೊಂಡು ತನ್ನ ಮೊಬೈಲ್ ನೆಲಕ್ಕೆ ಅಪ್ಪಳಿಸಿ ತೆರಳಿದ್ದ.

ಭೀಕರ ಸಂಚು ರೂಪಿಸಿದ ಆರೋಪಿ, ಕಾಲ್ನಡಿಗೆಯಲ್ಲಿ ಮನೆಗೆ ಮರಳುತ್ತಿದ್ದ ಲಕ್ಷ್ಮಿಗೆ ದ್ವಿಚಕ್ರ ವಾಹನ ಅಡ್ಡಗಟ್ಟಿ ಮತ್ತೆ ಒತ್ತಾಯಿಸಿದ್ದಾನೆ. ಆಕೆ ಮತ್ತೆ ನಿರಾಕರಿಸಿದಾಗ ಮಾಂಸ ಕತ್ತರಿಸುವ ಕತ್ತಿಯಿಂದ ಎದೆ, ಬೆನ್ನು ಹಾಗೂ ಕೈಗಳಿಗೆ ತೀವ್ರವಾಗಿ ಇರಿದು ಕೊಲೆ ಮಾಡಿದ್ದ. ಕೃತ್ಯದ ಬಳಿಕ ಪೊಲೀಸರ ಭಯದಿಂದ ಸಮೀಪದ ಲಿಂಬೆ ಗಿಡಕ್ಕೆ ಡ್ರಿಪ್ ಪೈಪ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಪೊಲೀಸ್ ತನಿಖೆ ಮತ್ತು ಸಾಕ್ಷ್ಯಧಾರ:

ಘಟನೆ ನಡೆದ ತಕ್ಷಣ ಹಾರೂಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್ 302 ಮತ್ತು 309 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಪಿಎಸ್‌ಐ ರಾಘವೇಂದ್ರ ಖೋತ್ ಮತ್ತು ಸಿಪಿಐ ಕೆ. ಎಸ್. ಹಟ್ಟಿ ಅವರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ವಿಚಾರಣೆ ವೇಳೆ ಮೃತ ಲಕ್ಷ್ಮಿಯ ತಂಗಿಯರು ಮತ್ತು ಗೆಳತಿಯರು ನೀಡಿದ ಸಾಕ್ಷ್ಯವು ಪ್ರಕರಣದಲ್ಲಿ ಪ್ರಮುಖ ಪುರಾವೆಯಾಯಿತು. ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, ಆರೋಪಿಯನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಈ ಭೀಕರ ಘಟನೆಯಿಂದ ಕೋಮು ಸಂಘರ್ಷ ಉಂಟಾಗುವ ಭೀತಿಯಿತ್ತು. ಆದರೆ ಪೊಲೀಸರು 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ಚಾಣಾಕ್ಷತನದಿಂದ ತನಿಖೆ ನಡೆಸಿದ್ದರು. ಇಂದು ನಿರಪರಾಧಿ ಮಗುವಿನ ಆತ್ಮಕ್ಕೆ ನ್ಯಾಯ ಸಿಕ್ಕಿದ್ದು, ಈ ತೀರ್ಪು ಸಮಾಜದಲ್ಲಿ ಇಂತಹ ಅಪರಾಧಗಳು ನಡೆಯದಂತೆ ತಡೆಯಲು ನೆರವಾಗಲಿದೆ ಎಂದು ಸರ್ಕಾರಿ ಅಭಿಯೋಜಕರಾದ ವೈ. ಜಿ. ತುಂಗಳ ತಿಳಿಸಿದರು.

ಬಳಿಕ ಮೃತ ಬಾಲಕಿಯ ತಂದೆ ಶೇಖರ್ ರುದ್ರನವರ ಮಾತನಾಡಿ‌
ಕೂಲಿ ಕೆಲಸ ಮಾಡುತ್ತಾ ಸಂಸಾರ ಸಾಗಿಸುತ್ತಿದ್ದೆವು. ಜಾತ್ರೆಗೆ ಹೋದಾಗ ನನ್ನ ಮಗಳ ಮೇಲೆ ರಕ್ತಸಿಕ್ತ ದಾಳಿ ನಡೆದಾಗ ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳಿಗೆ ಅಲೆದೆ, ಆದರೂ ಮಗಳು ಬದುಕಲಿಲ್ಲ. ನ್ಯಾಯಾಲಯ ನ್ಯಾಯ ಒದಗಿಸಿದೆ, ಆದರೆ ಮಗಳು ಮತ್ತೆ ಹಿಂತಿರುಗಿ ಬರುವುದಿಲ್ಲವಲ್ಲ ಎಂಬ ದುಃಖ ಸದಾ ಕಾಡುತ್ತದೆ ಎಂದರು.

ದೆ

Tags:

error: Content is protected !!