Belagavi

ಉಗಾರ ಶುಗರ್ ಎಥೆನಾಲ್ ಘಟಕದಿಂದ ಕಲುಷಿತ ಗಾಳಿ, ನೀರು: ಬೆಳಗಾವಿ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ

Share

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ್‌ನಲ್ಲಿ ಪರಿಸರ ಕಾಳಜಿಯ ಬೃಹತ್ ಜನಾಂದೋಲನ ಶುರುವಾಗಿದೆ. ಊರಿನ ಮಧ್ಯದಲ್ಲಿರುವ ಉಗಾರ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ ಎಥೆನಾಲ್ ಘಟಕವು ಜನವಸತಿ ಪ್ರದೇಶವನ್ನು ನರಕಸದೃಶಗೊಳಿಸುತ್ತಿದೆ ಎಂದು ಆರೋಪಿಸಿ, ನೂರಾರು ಸ್ಥಳೀಯರು ಮತ್ತು ಪರಿಸರ ಹೋರಾಟಗಾರರು ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಘಟಕವನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗಿದೆ.

ಉಗಾರ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯು ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಎಥೆನಾಲ್ ಘಟಕವನ್ನು ನಡೆಸುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ. ಘಟಕವು ಜೂನ್ 30, 2026 ಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯಾಚರಣೆ ಸಮ್ಮತಿ (CFO) ಅವಧಿ ಮುಗಿದಿದ್ದರೂ, ಕಾರ್ಯಾಚರಣೆ ಮುಂದುವರಿಸಿದೆ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಬೆಳಗಾವಿ ಹಾಗೂ ಚಿಕ್ಕೋಡಿಯ ಪರಿಸರ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತ ದೂರು ನೀಡಿದ್ದರೂ, ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗಿದೆ ಎಂಬ ನೆಪ ಹೇಳಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲಿಯೇ ಗಾಳಿಯಲ್ಲಿ ಸೂಕ್ಷ್ಮ ಧೂಳಿನ ಕಣಗಳ (PM 10) ಪ್ರಮಾಣ ಗರಿಷ್ಠ 554ಕ್ಕೆ ತಲುಪಿರುವುದು ದೃಢಪಟ್ಟಿದೆ. ಇದು ಆತಂಕಕಾರಿ ಮಟ್ಟವಾಗಿದ್ದರೂ, ಮಂಡಳಿಯ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿದೆ. ಕಾರ್ಖಾನೆಯು ತ್ಯಾಜ್ಯ ನೀರನ್ನು ಯಾವುದೇ ಸಂಸ್ಕರಣೆ ಇಲ್ಲದೆ ನೇರವಾಗಿ ಕಾಲುವೆ ಹಾಗೂ ನದಿಗಳಿಗೆ ಬಿಡುತ್ತಿರುವುದರಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ಕಾರ್ಖಾನೆ ಆಡಳಿತ ಮಂಡಳಿಯು ಸುಳ್ಳು ಅಪಪ್ರಚಾರ ಮಾಡುತ್ತಿದೆ ಎಂದು ಖಂಡಿಸಿರುವ ಪ್ರತಿಭಟನಾಕಾರರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಈ ಘಟಕವನ್ನು ಕಾಯಂ ಆಗಿ ಬಂದ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Tags:

error: Content is protected !!