Belagavi

ಬೆಳಗಾವಿ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಂಸದ ಜಗದೀಶ ಶೆಟ್ಟರ

Share

ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ವಿಳಂಬದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ ಅವರು ಇಂದು ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಅಮೃತ ಭಾರತ ಸ್ಟೇಶನ್ ಯೋಜನೆಯ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ಇಂದು ಬೆಳಗಾವಿ ರೈಲು ನಿಲ್ದಾಣದಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಪ್ರಧಾನಮಂತ್ರಿ ಅಮೃತ ಭಾರತ ಸ್ಟೇಶನ್ ಯೋಜನೆಯಡಿ ಮಂಜೂರಾದ ಸುಮಾರು 19 ಕೋಟಿ ರೂಪಾಯಿ ಅನುದಾನದಲ್ಲಿ ಫುಟ್ ಓವರ್ ಬ್ರಿಡ್ಜ್, ಎಸ್ಕಲೇಟರ್ ಹಾಗೂ ಲಿಫ್ಟ್ ಅಳವಡಿಕೆ ಕಾರ್ಯಗಳು ನಡೆಯುತ್ತಿವೆ. ಆದರೆ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಂಸದರು, ಕಾಮಗಾರಿ ವಿಳಂಬವನ್ನು ಪ್ರಶ್ನಿಸಿ ರೇಲ್ವೆ ಅಭಿಯಂತರರಾದ ಲಲನಕುಮಾರ ಮತ್ತು ಸೆಂತಿಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಫುಟ್ ಓವರ್ ಬ್ರಿಡ್ಜ್ ಕಾಮಗಾರಿಯನ್ನು 31ನೇ ಅಕ್ಟೋಬರ್ 2026ರ ಒಳಗಾಗಿ ಹಾಗೂ ಎಸ್ಕಲೇಟರ್ ಮತ್ತು ಲಿಫ್ಟ್ ಅಳವಡಿಕೆಯನ್ನು 30ನೇ ಸೆಪ್ಟೆಂಬರ್ 2026ರ ಒಳಗಾಗಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮುಂದುವರಿದು, ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ವಚ್ಛತೆ ಕೊರತೆ ಕುರಿತು ಬಂದಿರುವ ದೂರುಗಳ ಬಗ್ಗೆ ಎಚ್ಚರಿಕೆ ನೀಡಿದ ಸಂಸದರು, ಮುಂದಿನ ದಿನಗಳಲ್ಲಿ ರೈಲ್ವೆ ಸ್ಟೇಷನ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಅಲ್ಲದೆ, ದೇಸೂರು ರೈಲು ನಿಲ್ದಾಣವನ್ನು ಬೆಳಗಾವಿ ನಿಲ್ದಾಣಕ್ಕೆ ಪರ್ಯಾಯವಾಗಿ ಸರ್ವಾಂಗೀಣ ಅಭಿವೃದ್ಧಿಗೊಳಿಸುವ ಕುರಿತು ನೈರುತ್ಯ ರೇಲ್ವೆ ವಲಯದ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮಾಜಿ ಶಾಸಕರಾದ ಅನಿಲ ಬೆನಕೆ, ನಗರ ಪಾಲಿಕೆ ಸದಸ್ಯರಾದ ಜಯತೀರ್ಥ ಸವದತ್ತಿ ಹಾಗೂ ಇತರೆ ಬಿಜೆಪಿ ನಗರ ಸದಸ್ಯರು ಉಪಸ್ಥಿತರಿದ್ದರು ಎಂದು ಸಂಸದರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:

error: Content is protected !!