Belagavi

ಮಕ್ಕಳಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಲು ಚಿಗುರು ಕಾರ್ಯಕ್ರಮ ಸಹಾಯಕವಾಗಿದೆ: ಕೋಟಾರಗಸ್ತಿ

Share

ಬೆಳಗಾವಿ, ಮಕ್ಕಳಲ್ಲಿ ಅಡಗಿರುವ ವಿಶಿಷ್ಟ ಕಲೆಯನ್ನು ಪ್ರೋತ್ಸಾಹಿಸಲು ಚಿಗುರು ಎಂಬ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ ಎಂದು ಹಿರಿಯ ಸಾಹಿತಿಗಳಾದ ರವಿ ಕೋಟಾರಗಸ್ತಿ ಅವರು ಹೇಳಿದರು.

ನಗರದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ದಿ‌. ೨೨-೦೮-೨೦೨೬ ರಂದು ಆಯೋಜಿಸಿದ ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಒಂದು ದಿನದ ಮಕ್ಕಳ ಹಬ್ಬ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನಗೈದ ಪ್ರತಿಭೆಗಳನ್ನು ಆಯ್ಕೆ ಮಾಡಿ, ಅವರ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡುವ ಕಾರ್ಯಕ್ರಮ ಇದಾಗಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳು ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುವುದರ ಜೊತೆಗೆ ಉತ್ತಮ ಪ್ರಜೆಗಳನ್ನಾಗಿಸಲು ಸಹಾಯಕಾರಿಯಾಗಿವೆ ಎಂದರು.

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಸಹಾಯವಾಗುವಂತಹ ಚಿಗುರು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಮತಿ ವಿದ್ಯಾವತಿ ಎಚ್ ಭಜಂತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಾಹಿತ್ಯ ಮತ್ತು ಸಂಗೀತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮವಾದ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ ಮಕ್ಕಳಿಗೆ ತಿಳಿಸಿದರು.

ಮಕ್ಕಳಿಗೆ ಬೆಳೆಯುವ ಹಾಗೂ ವಿದ್ಯಾಭ್ಯಾಸ ಮಾಡುವ ಈ ಹಂತದಲ್ಲಿ ಸಾಹಿತ್ಯ ಮತ್ತು ಸಂಗೀತದ ಅವಶ್ಯಕತೆ ಬಹಳಷ್ಟು ಬೇಕು ಕಾರಣ ಸಂಗೀತದಿಂದ ಮಕ್ಕಳ ಮನಸ್ಸನ್ನು ಏಕಾಗ್ರತೆಯತ್ತ ತರುವ ಶಕ್ತಿ ಇದೆ ಎಂದರು.
ಈ ಪುಟಾಣಿ ಜಗತ್ತು ಸುಂದರವಾದ ತೋಟದ ತರಹ ಕಾಣುತ್ತಿದೆ ಅದರಲ್ಲಿ ಅರಳುವ ಹೂಗಳು ನಿವು ಎಂದು ವಿದ್ಯಾರ್ಥಿಗಳನ್ನು ಹೊಗಳಿದರು.

ಮಕ್ಕಳಲ್ಲಿರುವ ಪ್ರತಿಬೇಯನ್ನು ಹೊರಹಾಕುವ ಮುಖ್ಯ ಉದ್ದೇಶ ಈ ಚಿಗರು ಕಾರ್ಯಕ್ರಮದ್ದಾಗಿದೆ ಎಂದರು.

ಬೆಳಗಾವಿಯ ಲೇಖಕಿಯರ ಸಂಘದ ಅಧ್ಯಕ್ಷ ರಾದ ರಾಜನಂದಾ ಗಾರ್ಗಿ ಅವರು ಮಾತನಾಡಿ ನಮ್ಮ ಸಮಾಜದ ಚಿಗುರುಗಳಾದ ಮಕ್ಕಳ ಜೀವನವನ್ನು ಬೇಳೆಸುವುದೇ ಈ ಕಾರ್ಯಕ್ರಮದ ಮುಖ್ಯ ಧ್ಯೇಯವಾಗಿದೆ ಎಂದರು.

ಮಕ್ಕಳಲ್ಲಿ ಕೇವಲ ಶಿಕ್ಷಣವನ್ನು ಕಲಿಸುವುದಷ್ಟೇ ಅಲ್ಲದೇ ಅವರಲ್ಲಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳನ್ನು ಬೇಳೆಸಬೇಕು ಎಂದರು.

ಪ್ರತಿ ಮಕ್ಕಳಲ್ಲಿ ತಮ್ಮದೇ ಆದ ಸಾಮರ್ಥ್ಯ ಇರುತ್ತದೆ ಅದನ್ನು ಹೊರ ಹಾಕಲು ಈ ರೀತಿಯ ವೇದಿಕೆಗಳನ್ನು ರೂಪಿಸಿದ್ದು ತುಂಬ ಸಂತಸದ ವಿಷಯ ಎಂದರು.
ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ನರಾದ ಪರಮೇಶ್ವರ ಹೆಗಡೆ ಅವರು ಮಾತನಾಡಿ ಚಿಗುರು ಎಂದರೆ ಒಂದು ದೊಡ್ಡ ಮರವಲ್ಲದೆ ಇರಬಹುದು ಆದರೆ ಅದು ಅದೇ ಮರದ ಪ್ರಾರಂಭದ ಒಂದು ಪ್ರಮುಖ ಅಂಶ ಎಂದು ಗಾರ್ಗಿ ಹೇಳಿದರು.

ಮಕ್ಕಳ ಪ್ರತಿಭೆ ಗುರುತಿಸಲು ಹಮ್ಮಿಕೊಂಡ ಚಿಗುರು ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಏರ್ಪಡಿಸಿರುವುದು ತಮಗೆ ಸಂತಸ ತಂದಿದೆ.
ಉತ್ತಮ ಬೆಳೆಗೆ ಫಲವತ್ತಾದ ಭೂಮಿ ಬೇಕು ಹಾಗೇ ಅರಳುವ ಪ್ರತಿಭೆಗೆ ಚಿಗುರು ಎಂಬ ಕಾರ್ಯಕ್ರಮ ಉತ್ತಮ ವೇದಿಕೆಯಾಗಬೇಕು ಎಂದು ಅವರು ತಿಳಿಸಿದರು.

ನಂತರ ಅನಘಾ ಸುಂಟಕರ ಮತ್ತು ತಂಡದಿಂದ ವಾದ್ಯ ಸಂಗೀತ,ಆದಿತಿ ಎಂ ಬೆಟಗೇರಿ ಅವರಿಂದ ವಚನ ಸಂಗೀತ, ವಿನಾಯಕ ಕಮ್ಮಾರ ಹಾಗೂ ಸಂಗಡಿಗರಿಂದ ಜನಪದ ಸಂಗೀತ, ರವಿ ನೃತ್ಯ ಕಲಾ ಮಂದಿರದ ಜೆ ಎಸ್ ಸಿರಿ ಅವರಿಂದ ಸಮೂಹ ನೃತ್ಯ, ಬಿ.ಕೆ ಮಾಡೆಲ್ ಪ್ರೌಢಶಾಲಾ ವಿದ್ಯಾರ್ಥಿ ಶುಕ್ಲಾಂಭರ ಪತ್ತಾರ ತ್ರಿ ಅವರಿಂದ ಏಕಪಾತ್ರಾಭಿನಯ, ರಾಮಗೌಡ ಪಾಟೀಲ ಹಾಗೂ ತಂಡದಿಂದ ನಾಟಕ/ ಸಮೂಹ ನೃತ್ಯ ಕಾರ್ಯಕ್ರಮ ಜರುಗಿದವು.

ಈ ಸಂದರ್ಭದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾದ ಭಿಮಪ್ಪ ಹುದ್ದಾರ, ಹಿರಿಯ ಕಲಾವಿದರಾದ ಪಂ ರಾಜಪ್ರಭು ಧೋತ್ರೆ, ರವಿ ನೃತ್ಯ ಕಲಾ ಮಂದಿರದ ಗುರುಗಳಾದ ರವಿಂದ್ರ ಶರ್ಮಾ, ಸಂತ ಮೀರಾ ಆಂಗ್ಲ ಮಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀ ಮತಿ ಸುಜಾತಾ ದಫ್ತರದಾರ, ಎಲ್ಲ ಮಕ್ಕಳ ಪೋಷಕರು ಸೇರಿದಂತೆ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
***

Tags:

error: Content is protected !!