ಬೆಳಗಾವಿಯ ಗೋವಾವೇಸ್’ನ ಮಹಾನಗರ ಪಾಲಿಕೆ ಈಜುಕೊಳದಲ್ಲಿ ಆಬಾ ಮತ್ತು ಹಿಂದ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ 21ನೇ ಮರಾಠಾ ಯುವಕ ಸಂಘದ ಅಂತರಶಾಲೆ ಈಜು ಸ್ಪರ್ಧೆಗಳು ಅದ್ಧೂರಿಯಾಗಿ ಆರಂಭಗೊಂಡಿವೆ. ವಿವಿಧ ನಗರಗಳಿಂದ ಆಗಮಿಸಿರುವ ಮುನ್ನೂರಕ್ಕೂ ಅಧಿಕ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಮರಾಠಾ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿರುವ ಈ ಪ್ರತಿಷ್ಠಿತ ಸ್ಪರ್ಧೆಗೆ ಉದ್ಯಮಿ ಮಹಾದೇವ ಚೌಗುಲೆ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಷ್ಪಾರ್ಚನೆಗೈದು ಚಾಲನೆ ನೀಡಿದರು. ಡಾ. ರವಿ ಪಾಟೀಲ್ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಳೆದ ಅರವತ್ತು ವರ್ಷಗಳಿಂದ ಸಂಘವು ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತ ಬಂದಿದ್ದು, ದಿವಂಗತ ಎಲ್.ಆರ್. ಪಾಟೀಲ್ ಅವರ ಸ್ಮರಣಾರ್ಥ ಈ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಬಾಳಾಸಾಹೇಬ್ ಕಾಕತಕರ್ ತಿಳಿಸಿದರು. ಬೆಳಗಾವಿ ಮಾತ್ರವಲ್ಲದೆ ಹುಬ್ಬಳ್ಳಿ, ಗೋವಾ, ಬೆಂಗಳೂರು ಹಾಗೂ ಕೊಲ್ಹಾಪುರ ಸೇರಿದಂತೆ ವಿವಿಧ ಪ್ರದೇಶಗಳ ಕ್ರೀಡಾಪಟುಗಳು ಇದರಲ್ಲಿ ಭಾಗಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಯುವಕರಿಗೆ ಉತ್ತಮ ವೇದಿಕೆ ಲಭಿಸಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.

