ಖಾನಾಪುರ ತಾಲೂಕಿನ ಹತ್ತರಗುಂಜಿ ಗ್ರಾಮದ ಹಕ್ಕಿಪಿಕ್ಕಿ ಆದಿವಾಸಿ ಸಮುದಾಯದ ವಸತಿ ಪ್ರದೇಶಕ್ಕೆ ಇತ್ತೀಚೆಗೆ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂದೆ ಅವರು ಖುದ್ದಾಗಿ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದ್ದರು. ಈ ಆದೇಶ ಬೆನ್ನಲ್ಲೇ ಇದೀಗ ಹಲಕರ್ಣಿ ಗ್ರಾಮ ಪಂಚಾಯತ್ ವತಿಯಿಂದ ಹಕ್ಕಿಪಿಕ್ಕಿ ಕಾಲೋನಿಗೆ ತ್ವರಿತವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಹರ್ಷ ಮೂಡಿಸಿದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಹಕ್ಕಿಪಿಕ್ಕಿ ಆದಿವಾಸಿ ಮತ್ತು ಕಾತ್ಕರಿ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂದೆ ಅವರು ತಾಲೂಕಿನ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳ ತಂಡದೊಂದಿಗೆ ಹತ್ತರಗುಂಜಿ ಗ್ರಾಮದ ಇಂದಿರಾ ನಗರದ ಹಕ್ಕಿಪಿಕ್ಕಿ ವಸತಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಎರಡೂ ಸಮುದಾಯಗಳ ಶಿಕ್ಷಣ, ಆರೋಗ್ಯ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಸಿಇಒ ಅವರ ಈ ಸೂಚನೆಗೆ ತಕ್ಷಣವೇ ಸ್ಪಂದಿಸಿದ ಹಲಕರ್ಣಿ ಗ್ರಾಮ ಪಂಚಾಯತ್, ಇಂದೇ ಹಕ್ಕಿಪಿಕ್ಕಿ ಕಾಲೋನಿಗೆ ಕುಡಿಯುವ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮೂಲಕ ಆದಿವಾಸಿ ಜನರ ದಾಹ ನೀಗಿಸಿದೆ. ಈ ತ್ವರಿತ ಕ್ರಮಕ್ಕಾಗಿ ಹಕ್ಕಿಪಿಕ್ಕಿ ಸಮುದಾಯದ ಮುಖಂಡರು ಹಾಗೂ ನಿವಾಸಿಗಳು ಜಿ.ಪಂ. ಸಿಇಒ ರಾಹುಲ್ ಶಿಂದೆ ಅವರಿಗೆ ಹಾಗೂ ಹಲಕರ್ಣಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ಮನಃಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
