ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಪರಿಣಾಮ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಜೀವನಾಡಿಯಾಗಿರುವ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಪ್ರಮಾಣಕ್ಕೆ ಕುಸಿದಿದೆ. ಕೃಷ್ಣಾ ನದಿ ಬರಿದಾಗಿದ್ದು, ರೈತರ ಬೆಳೆ, ಜನರ ಕುಡಿಯುವ ನೀರು ಹಾಗೂ ಜಾನುವಾರುಗಳ ಭವಿಷ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಕುರಿತು ಇಲ್ಲಿದೆ ಒಂದು ವರದಿ…


ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿಲ್ಲ. ಪರಿಣಾಮ ನದಿಗಳು ಬತ್ತುತ್ತಿದ್ದು, ಜಲಾಶಯಗಳು ಖಾಲಿಯಾಗುತ್ತಿವೆ. ಇನ್ನೂ 123 ಟಿಎಂಸಿ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಸದ್ಯ ಬಳಕೆಗೆ ಉಳಿದಿರುವುದು ಕೇವಲ 3.14 ಟಿಎಂಸಿ ನೀರು ಮಾತ್ರ. ಸಾಮಾನ್ಯವಾಗಿ ಜೂನ್ ಅಂತ್ಯದ ವೇಳೆಗೆ ಜಲಾಶಯದಲ್ಲಿ ಉತ್ತಮ ಪ್ರಮಾಣದ ನೀರು ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಜಲಾಶಯ ಬಹುತೇಕ ಬರಿದಾಗಿದೆ.
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರಿಗೆ ಆಲಮಟ್ಟಿ ಜಲಾಶಯವೇ ಜೀವನಾಡಿ. ಲಕ್ಷಾಂತರ ಜನರ ಕುಡಿಯುವ ನೀರು, ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಹಾಗೂ ಜಾನುವಾರುಗಳು ಈ ಜಲಾಶಯದ ನೀರನ್ನೇ ಅವಲಂಬಿಸಿವೆ. ಆದರೆ ಒಳಹರಿವು ಸಂಪೂರ್ಣ ಕುಂಠಿತ ವಾಗಿರುವುದರಿಂದ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯೂ ಸವಾಲಾಗುವ ಸಾಧ್ಯತೆ ಇದೆ. ಜಿಲ್ಲೆಯ ರೈತರು ಈಗಾಗಲೇ ಬಿತ್ತನೆ ಮಾಡಿದ್ದು, ಮಳೆಯ ಕೊರತೆಯಿಂದ ಬೆಳೆ ಒಣಗುವ ಆತಂಕ ಎದುರಿಸುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ನೀರಾವರಿ ವ್ಯವಸ್ಥೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಬೇಕು ಎಂಬ ನಿರೀಕ್ಷೆಯಲ್ಲಿ ರೈತರು ಮತ್ತು ಜನರು ಕಾಯುತ್ತಿದ್ದಾರೆ.
ಮಳೆಯ ಕೊರತೆಯ ಪರಿಣಾಮ ಮೀನುಗಾರಿಕೆಯ ಮೇಲೂ ಬಿದ್ದಿದ್ದರೂ, ಸದ್ಯ ಜನರ ಪ್ರಮುಖ ಚಿಂತೆ ಕುಡಿಯುವ ನೀರು ಮತ್ತು ಕೃಷಿಗೆ ನೀರು ಸಿಗುವುದೇ ಆಗಿದೆ. ಮುಂಗಾರು ಇನ್ನಷ್ಟು ವಿಳಂಬವಾದರೆ ಅವಳಿ ಜಿಲ್ಲೆಗಳ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದ್ದು, ಎಲ್ಲರ ಚಿತ್ತ ಈಗ ಆಕಾಶದತ್ತ ನೆಟ್ಟಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
