ಬಾಗಲಕೋಟೆಯಲ್ಲಿ ಬರೋಬ್ಬರಿ 45 ಲಕ್ಷಕ್ಕೂ ಹೆಚ್ಚು ಹಣದ ಅಕ್ರಮ ವರ್ಗಾವಣೆ ನಡೆದಿದ್ದು, ಉದ್ಯೋಗಿಗಳಷ್ಟೇ ಅಲ್ಲದೆ ಹೊರಗಿನವರ ಖಾತೆಗೂ ಹಣ ಜಮೆಯಾಗಿರುವ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.


ಬಾಗಲಕೋಟೆಯ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (KPTCL) ಜೂನ್ 2023 ರಿಂದ ಜನವರಿ 2026ರ ಅವಧಿಯಲ್ಲಿ ಬರೋಬ್ಬರಿ 45,39,870 ರೂಪಾಯಿಗಳ ಬೃಹತ್ ಆರ್ಥಿಕ ಅಕ್ರಮ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹಿರಿಯ-ಕಿರಿಯ ಅಧಿಕಾರಿಗಳು, ಲೆಕ್ಕಾಧಿಕಾರಿ ಹಾಗೂ ಎಫ್ಡಿಸಿ ಸಿಬ್ಬಂದಿ ಸೇರಿದಂತೆ ಒಟ್ಟು 23 ಜನ ನೌಕರರು ಶಾಮೀಲಾಗಿ, ನಿಯಮ ಗಾಳಿಗೆ ತೂರಿ ಪರಿಷ್ಕೃತ ವೇತನ, ಬಾಕಿ ಭತ್ಯೆ, ದ್ವಿಗುಣ ವೇತನ ಹಾಗೂ ಹಬ್ಬದ ಮುಂಗಡದ ಹೆಸರಿನಲ್ಲಿ ಮನಸೋಇಚ್ಛೆ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಮೇಲಧಿಕಾರಿಗಳ ಅನುಮತಿಯೇ ಇಲ್ಲದೆ ಇಲಾಖೆಯ ಉದ್ಯೋಗಿಗಳಲ್ಲದ ಹೊರಗಿನವರ (ನಾನ್-ಎಂಪ್ಲಾಯಿ) ಬ್ಯಾಂಕ್ ಖಾತೆಗಳಿಗೂ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಜೆಇ ನಾರಾಯಣ ಭಜಂತ್ರಿ ಎಂಬುವವರ ಸಂಬಳವನ್ನು ಕಳೆದ 6 ತಿಂಗಳಿನಿಂದ ತಡೆಹಿಡಿದು ಓರ್ವನಿಗೆ ಮಾತ್ರ ಶಿಕ್ಷೆ ನೀಡಲಾಗಿದ್ದು, ಉಳಿದ 22 ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಯಾವಾಗ ಎಂಬ ಪ್ರಶ್ನೆ ಎದ್ದಿತ್ತು; ಇದೀಗ ಈ ಮಹಾ ಹಗರಣದ ಗಂಭೀರತೆ ಅರಿತ ಬೆಂಗಳೂರಿನ ಕೆಪಿಟಿಸಿಎಲ್ ಮುಖ್ಯ ಕಚೇರಿಯ ನಿರ್ದೇಶಕರು ನಿವೃತ್ತ ಅಧಿಕಾರಿಯನ್ನೂ ಒಳಗೊಂಡಂತೆ ಒಟ್ಟು 23 ಜನ ಆರೋಪಿ ಸಿಬ್ಬಂದಿಗಳಿಗೆ ನಿಬಂಧನೆ 11ರ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಲು ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ.
