ಬೆಳಗಾವಿಯ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಸಡಗರದಿಂದ ಜರುಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉತ್ತಮ ಸಾಹಿತಿ ಪ್ರೇಮಾ ತಾಶಿಲ್ದಾರ ಅವರು ಸಾಹಿತ್ಯದ ಹಾದಿ ಹಾಗೂ ಅದರ ಮಹತ್ವದ ಕುರಿತು ಅಮೂಲ್ಯ ನುಡಿಗಳನ್ನಾಡಿದ್ದಾರೆ.


ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರದಂದು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ, ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ, ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವಿಜ್ರಂಭಣೆಯಿಂದ ಜರುಗಿದವು. ಕಾರ್ಯಕ್ರಮವು ಆಶಾ ಸಂಸದ್ದಿ ಮತ್ತು ಸಂಗಡಿಗರ ನಾಡಗೀತೆಯೊಂದಿಗೆ ಆರಂಭವಾಯಿತು. ಸಂಘದ ಉಪಾಧ್ಯಕ್ಷೆ ವಾಸಂತಿ ಮೇಳೇದ ಎಲ್ಲರನ್ನೂ ಹೃದಯಪೂರ್ವಕವಾಗಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಲಲಿತಾ ಕ್ಯಾಸೆನ್ನವರ ವಾರ್ಷಿಕ ವರದಿ ವಾಚಿಸಿದರು. ಇದೇ ವೇಳೆ ಕಾರ್ಯಕ್ರಮದ ನಿರೂಪಣೆ ನಿರ್ವಹಿಸಿದ ಡಾ. ಅನ್ನಪೂರ್ಣ ಹಿರೇಮಠ ಇಡೀ ವರ್ಷದ ಲೆಕ್ಕಪತ್ರವನ್ನು ಪೈಸೆಯೂ ಬಿಡದೆ ಒಪ್ಪಿಸಿದರು. ಪುಸ್ತಕ ಪ್ರಶಸ್ತಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ರಂಗಕರ್ಮಿ ಶಿರೀಶ್ ಜೋಶಿ ಹಾಗೂ ಹಿರಿಯ ಸಾಹಿತಿ ಸ. ರಾ. ಸುಳಕುಡೆ ಇವರನ್ನು ಸನ್ಮಾನಿಸಲಾಯಿತು. ಸಾಧಕರ ಪರಿಚಯವನ್ನು ರಾಜೇಶ್ವರ ಹೆಗಡೆ ಹಾಗೂ ಸುಪ್ರಿಯಾ ದೇಶಪಾಂಡೆ ನಡೆಸಿಕೊಟ್ಟರು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ, ಶ್ರೀರಂಗ ಜೋಶಿ, ನೀಲಗಂಗಾ ಚರಂತಿಮಠ, ಜ್ಯೋತಿ ಬದಾಮಿ, ಹೇಮಾ ಸೋನೊಳ್ಳಿ, ಜಯಶೀಲಾ ಬ್ಯಾಕೋಡ ಮತ್ತು ಶೈಲಜಾ ಭಿಂಗೆ ಸೇರಿದಂತೆ ಬೆಳಗಾವಿಯ ಎಲ್ಲಾ ಸಾಹಿತಿಗಳು ಹಾಜರಿದ್ದು ಶೋಭೆ ತಂದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆ ಕಸ್ತೂರೆವ್ವಾ ಮಣ್ಣಿಕೇರಿ ಅವರಿಗೆ ಸಾಹಿತಿ ಹಮೀದಾಬೇಗಂ ಅವರು ಇಟ್ಟಂತಹ ಲಾಲ್ ಸಾಹೇಬ್ ಕಮಲ್ ಸಾಹೇಬ್ ದೇಸಾಯಿ ರಂಗ ಕಲಾವಿದರ ಸ್ಮರಣಾರ್ಥ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕಸ್ತೂರೆವ್ವಾ ಅವರು ಹೆಣ್ಣಿನ ಸಹನಾಶೀಲತೆ ಮತ್ತು ಪಾರಿಜಾತದ ಹಲವು ಮಜಲುಗಳನ್ನು ಪರಿಚಯಿಸುತ್ತಾ ತಮ್ಮ ಸುಂದರ ಕಂಠದಿಂದ ಹಾಡಿ ಎಲ್ಲರ ಮನಸ್ಸನ್ನು ತಣಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಘದ ಅಜೀವ ಸದಸ್ಯರಾದ ಪ್ರೇಮಾ ತಾಶಿಲ್ದಾರ ಅವರು ಮಾತನಾಡಿ, “ಸಂಘದ 25 ವರ್ಷಗಳ ಸುಧೀರ್ಘ ಹಾದಿ ಮತ್ತು ಹಿರಿಯ ಸಾಹಿತಿ ಆಶಾ ಕಡಪಟ್ಟಿ ಅವರ ಧೈರ್ಯ, ಪರಿಶ್ರಮ ಸ್ಮರಣೀಯವಾದುದು. ಎಲ್ಲ ಪ್ರಕಾರದ ಸಾಹಿತ್ಯವನ್ನು ಈಗ ನಮ್ಮ ಸಂಘದ ಕವಯತ್ರಿಯರು ಬರೆಯುವಲ್ಲಿ ಸಿದ್ದಹಸ್ತರಾಗಿರುವುದು ನನಗೆ ಸಂತಸ ತಂದಿದೆ. ಬದುಕಿನ ನಿರ್ವಚನವೇ ಸಾಹಿತ್ಯ. ಸಾಹಿತ್ಯದಲ್ಲಿ ಪ್ರಸ್ತುತತೆ ವಸ್ತುವಾಗಬೇಕು, ಓದಿನೊಂದಿಗೆ ಬರಹ ಪ್ರಭುದ್ಧವಾಗಲಿ, ಬದುಕು ಬರಹ ಒಂದೇ ಆಗಿರಬೇಕು. ಮಾನವೀಯತೆಗೆ ಪ್ರೇರಕವಾದ ಸಾಹಿತ್ಯವಿರಲಿ” ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸುಮಾ ಕಿತ್ತೂರ ಅವರು ಮಾತನಾಡಿ, ನಮ್ಮ ಲೇಖಕಿಯರ ಸಂಘದಲ್ಲಿ 50 ಜನ ಸಾಧಕಿಯರು ಇರುವುದೇ ಹೆಮ್ಮೆ, ಸಾಹಿತ್ಯವೆಂದರೆ ಒಂದು ಭಾವಗಳ ಬುತ್ತಿ ಎಂದು ಎಲ್ಲರನ್ನೂ ಶ್ಲಾಘಿಸಿದರು. ಸುನಂದಾ ಹಾಲಭಾವಿಯವರು ವಂದನಾರ್ಪಣೆ ಮಾಡಿದರು. ತದನಂತರ ಸುನಿತಾ ನಂದೆನ್ನವರ ಅವರ ನಿರೂಪಣೆಯಲ್ಲಿ ಶಿವತಾಂಡವ ನೃತ್ಯ, ಗಂಡ ಹೆಂಡಿರ ಸಂವಾದ, ಏಕಪಾತ್ರಾಭಿನಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೊನೆಯಲ್ಲಿ ಸುಪ್ರಿಯಾ ದೇಶಪಾಂಡೆ ದ್ವಿತೀಯ ಬಾರಿ ವಂದನಾರ್ಪಣೆ ನೆರವೇರಿಸಿದರು.
