Belagavi

ವಡಗಾಂವ್-ಹಳೆಯ ಬೆಳಗಾವಿಯಲ್ಲಿ ವಿಜೃಂಭಣೆಯ ಜಗನ್ನಾಥ ರಥಯಾತ್ರೆ: ಕೃಷ್ಣಮಯವಾದ ಬೀದಿಗಳು!

Share

” ‘ಜೈ ಜಗನ್ನಾಥ… ಜೈ ಬಲದೇವ… ಜೈ ಸುಭದ್ರಾ…!’ ಎಂಬ ಅಖಂಡ ಜಯಘೋಷದೊಂದಿಗೆ ಬೆಳಗಾವಿಯ ವಡಗಾಂವ್ ಹಾಗೂ ಹಳೆಯ ಬೆಳಗಾವಿ ಪ್ರದೇಶಗಳು ಸಂಪೂರ್ಣ ಕೃಷ್ಣಮಯವಾಗಿದ್ದವು. ವಡಗಾಂವ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತ್ಯಂತ ವಿಜೃಂಭಣೆಯಿಂದ ಶ್ರೀ ಜಗನ್ನಾಥ ರಥಯಾತ್ರೆಯನ್ನು ಆಯೋಜಿಸಲಾಗಿದ್ದು, ಸಾವಿರಾರು ಭಕ್ತರು ಈ ದಿವ್ಯ ಕ್ಷಣಕ್ಕೆ ಸಾಕ್ಷಿಯಾದರು.

ಸ್ಥಳೀಯ ರಾಮದೇವ ಗಲ್ಲಿಯಿಂದ ಭಕ್ತಿ, ಶ್ರದ್ಧೆ ಹಾಗೂ ಅಪಾರ ಉತ್ಸಾಹದ ವಾತಾವರಣದಲ್ಲಿ ರಥಯಾತ್ರೆಗೆ ಅದ್ಧೂರಿ ಚಾಲನೆ ನೀಡಲಾಯಿತು. ಇಸ್ಕಾನ್ ಸಂಸ್ಥೆಯ ಭಕ್ತಿರಸಾಮೃತ ಮಹಾರಾಜ್ ಹಾಗೂ ಸನಾತನ ಪ್ರಭು ಅವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಈ ಶುಭ ಸಂದರ್ಭದಲ್ಲಿ ನೂರಾರು ಮಹಿಳೆಯರು ಮತ್ತು ಪುರುಷರು ರಥದ ದರ್ಶನ ಪಡೆದು, ರಥದ ಹಗ್ಗವನ್ನು ಎಳೆಯುವ ಮೂಲಕ ಪುನೀತರಾದರು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು ಬಿಡಿಸಿದ್ದ ವರ್ಣರಂಜಿತ ಹಾಗೂ ಆಕರ್ಷಕ ರಂಗೋಲಿಗಳು ರಥಯಾತ್ರೆಯ ಶೋಭೆಯನ್ನು ಇಮ್ಮಡಿಗೊಳಿಸಿದವು.

ರಥಯಾತ್ರೆಯ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಭಕ್ತಿರಸಾಮೃತ ಮಹಾರಾಜ್ ಹಾಗೂ ಸನಾತನ ಪ್ರಭುಗಳು, “ಕೋಟಿ ಕೋಟಿ ಭಕ್ತರಿಗೆ ಸಾಕ್ಷಾತ್ ಜಗನ್ನಾಥನ ದರ್ಶನ ಕಲ್ಪಿಸುವ ಜಗನ್ನಾಥ ರಥಯಾತ್ರೆಯು ಅನಾಧಿ ಕಾಲದಿಂದಲೂ ಅತ್ಯಂತ ಪವಿತ್ರವಾಗಿ ನಡೆದುಕೊಂಡು ಬಂದಿದೆ. ಪ್ರತಿಯೊಬ್ಬರ ಹೃದಯದಲ್ಲೂ ನಿಃಸ್ವಾರ್ಥ ಪ್ರೀತಿ ಹಾಗೂ ಭಕ್ತಿ ನೆಲೆಸಲಿ ಎಂಬುದೇ ಈ ಯಾತ್ರೆಯ ಮುಖ್ಯ ಉದ್ದೇಶ,” ಎಂದು ತಿಳಿಸಿದರು. ಇದೇ ವೇಳೆ ಸ್ಥಳೀಯ ಯುವತಿಯರು ಹಾಗೂ ಭಕ್ತರು ಮೆರವಣಿಗೆಯುದ್ದಕ್ಕೂ ‘ಹರೇ ಕೃಷ್ಣ’ ಮಹಾಮಂತ್ರವನ್ನು ಜಪಿಸುತ್ತಾ, ಸಾಂಸ್ಕೃತಿಕ ಸೇವೆಯೊಂದಿಗೆ ಭಕ್ತಿಪರವಶರಾಗಿ ಕುಣಿದು ಕುಪ್ಪಳಿಸಿದರು.

ವಡಗಾಂವ್‌ನಿಂದ ಹಳೆಯ ಬೆಳಗಾವಿಯವರೆಗಿನ ಪ್ರತಿಯೊಂದು ರಸ್ತೆಯೂ ಶ್ರೀಕೃಷ್ಣನ ಭಕ್ತಿರಂಗಿನಲ್ಲಿ ನsnಾಯಿಸಲ್ಪಟ್ಟಿತ್ತು. ಸ್ಥಳೀಯ ಆಯೋಜಕರು ಹಾಗೂ ಹಳೆಯ ಬೆಳಗಾವಿಯ ಭಕ್ತರ ಅಪಾರ ಶ್ರಮದಿಂದಾಗಿ ಈ ಪ್ರಥಮ ಪ್ರಯತ್ನವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಂಜೆ ೭ ರಿಂದ ೧೦ ಗಂಟೆಯವರೆಗೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಬೃಹತ್ ಜಗನ್ನಾಥ ಮಹಾಪಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಶ್ರದ್ಧೆ, ಸಂಸ್ಕೃತಿ ಮತ್ತು ಭಕ್ತಿಯ ಈ ದಿವ್ಯ ಸಂಗಮವು ಪ್ರತಿಯೊಬ್ಬ ಭಕ್ತನ ಮನಸ್ಸಿನಲ್ಲಿ ಸದಾ ಹಸಿರಾಗಿರುವಂತಹ ಸುಂದರ ನೆನಪನ್ನು ಉಳಿಸಿದೆ.

Tags:

error: Content is protected !!