ಬೆಳಗಾವಿ ಗಡಿ ವಿವಾದ ಹಾಗೂ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರ ವಿಳಂಬದ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಇಂದು ಮಹತ್ವದ ಸಭೆ ನಡೆಸಿ ರಾಜ್ಯ ಸರ್ಕಾರಕ್ಕೆ ಕಡಾಖಂಡಿತ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಮಾದರಿಯಲ್ಲಿ ತಕ್ಷಣವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಬೇಕು ಮತ್ತು ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ತರಲು ವಿಫಲರಾದರೆ ಧರಣಿ ಸತ್ಯಾಗ್ರಹ ಹೂಡುವುದಾಗಿ ಸಂಘಟನೆಗಳು ಒಕ್ಕೊರಲಿನಿಂದ ನಿರ್ಣಯಿಸಿವೆ.”

ಬೆಳಗಾವಿಯ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಧ್ಯಕ್ಷ ಮಹಾದೇವ ತಳವಾರ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಸಭೆ ಜರುಗಿತು. ಸಭೆಯಲ್ಲಿ ಪ್ರಮುಖವಾಗಿ 2004ರ ಮಹಾರಾಷ್ಟ್ರ ಸರ್ಕಾರದ ಸುಪ್ರೀಂ ಕೋರ್ಟ್ ದಾವೆಯನ್ನು ಪ್ರಾಥಮಿಕ ಹಂತದಲ್ಲೇ ತಿರಸ್ಕರಿಸುವಂತೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು, ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಗಡಿ ಸಂರಕ್ಷಣಾ ಆಯೋಗವನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಿ ನಿವೃತ್ತ ನ್ಯಾಯಮೂರ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಮತ್ತು ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಹಾಗೂ ಹಿರಿಯ ಹೋರಾಟಗಾರ ಅಶೋಕ ಚಂದರಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಯಿತು. ಮಹಾರಾಷ್ಟ್ರ ಮಾದರಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿ, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಸದಸ್ಯರ ನೇತೃತ್ವದಲ್ಲಿ ಕೇಂದ್ರದ ಮೇಲೆ ಒತ್ತಡ ತರಲು ಹಾಗೂ ಸುವರ್ಣ ಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಲು ಒತ್ತಾಯಿಸಲಾಯಿತು. ಇದೇ ವೇಳೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಪತ್ರ ವ್ಯವಹಾರದ ನೆಪದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಸಭೆಯು, ಈ ಕುರಿತು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲು ನಿರ್ಧರಿಸಿತು. ಒಂದು ವೇಳೆ ಬಿಜೆಪಿ ನಾಯಕರು, ಶಾಸಕರು, ಮಹಾಪೌರರು ಹಾಗೂ ಉಪಮಹಾಪೌರರು ಪಾಲಿಕೆ ಸಭೆ ಕರೆದು ಗೊತ್ತುವಳಿ ಪಾಸು ಮಾಡಲು ವಿಫಲರಾದರೆ ಪಾಲಿಕೆ ಎದುರು ಬಿಡಾರ ಹೂಡಿ ಪ್ರಾತಿನಿಧ್ಯ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಲಾಯಿತು.
ರಾಜಕೀಯ ಕಾರಣಕ್ಕಾಗಿ ಜಗಳ ತೆಗೆಯುವ ಎಂಇಎಸ್ ನಾಯಕರಿಗೆ ಜಿಲ್ಲಾಧಿಕಾರಿಗಳು ಸಮಿತಿ ರಚನೆಯ ಭರವಸೆ ನೀಡಿರುವುದನ್ನು ಖಂಡಿಸಿದ ಈ ಸಭೆಯಲ್ಲಿ, ಅಧ್ಯಕ್ಷ ಅಶೋಕ ಚಂದರಗಿ ಅವರು ಗಡಿ ವಿದ್ಯಮಾನಗಳನ್ನು ಸವಿಸ್ತಾರವಾಗಿ ವಿವರಿಸಿದರು. ಸಭೆಯಲ್ಲಿ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಧ್ಯಕ್ಷ ಬಲರಾಮು ಮಾಸೇನಟ್ಟಿ, ಕಿತ್ತೂರು ಕರ್ನಾಟಕ ಸೇನೆಯ ಯುವ ಘಟಕದ ರಾಜ್ಯಧ್ಯಕ್ಷ ಮಹೇಶ ಶೀಗಿಹಳ್ಳಿ (ಸ್ವಾಗತ ಮತ್ತು ವಂದನಾರ್ಪಣೆ), ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜೇದ ಹಿರೇಕೋಡಿ, ಕರುನಾಡ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲಪ್ಪ ಗುಡಗೇನಟ್ಟಿ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜು ಕೋಲಾ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವರೆಡ್ಡಿ ಹುಬ್ಬರೆಡ್ಡಿ, ಹಿರಿಯ ಹೋರಾಟಗಾರ ಷರೀಫ್ ಸನದಿ, ನಾಗೇಶ ಕೊಪ್ಪದ, ಕರವೇ (ಯುವ ಸೇನೆ) ಅಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಕರವೇ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ, ಗಡಿನಾಡು ಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷ ಎಸ್.ಎಸ್. ಮೂಕನವರ, ನೃಪತುಂಗ ಯುವಕ ಸಂಘದ ಅಧ್ಯಕ್ಷ ಸಾಗರ ಬೋರಗಲ್ಲ, ಗಡಿನಾಡು ಕನ್ನಡಿಗರ ಸೇನೆಯ ಶಿವಾಜಿ ಗೋರವ ಹಾಗೂ ಸಂಗೀತ ಕಾಂಬಳೆ ಮುಂತಾದ ನಾಯಕರು ಉಪಸ್ಥಿತರಿದ್ದು ತಮ್ಮ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದರು.
