Belagavi

ಪತಿ ಜೈಲುಪಾಲು, ಮಗಳ ಶಿಕ್ಷಣಕ್ಕಾಗಿ ತಾಯಿಯ ಕಣ್ಣೀರಿನ ಹೋರಾಟ: ಗದಗಿನಿಂದ ಹಿಂಡಲಗಾ ಜೈಲಿಗೆ ಅಲೆಯುತ್ತಿರುವ ಅಸಹಾಯಕ ಮಹಿಳೆ!

Share

ಜಾತಿ ಮೀರಿ ಪ್ರೀತಿಸಿ ಮದುವೆಯಾದ ಆಕೆಗೆ ಒಲಿದಿದ್ದು ಮಾತ್ರ ತೀವ್ರ ನಿರಾಸೆ ಮತ್ತು ಕಣ್ಣೀರು. ಹೆಣ್ಣು ಮಗು ಹುಟ್ಟಿದ್ದಕ್ಕೇ ಮೊದಲ ಮಗಳನ್ನು ಕೊಂದ ಪಾಪಿ ಪತಿ ಈಗ ಜೈಲು ಸೇರಿದ್ದರೆ, ಇರುವ ಎರಡನೇ ಮಗಳ ಭವಿಷ್ಯಕ್ಕಾಗಿ ಆಕೆಯ ತಾಯಿ ಗಂಡನ ಆಧಾರ್ ಕಾರ್ಡ್ ಸಿಗದೇ ಬೀದಿ ಬೀದಿ ಅಲೆಯುತ್ತಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಗದಗ ಮೂಲದ ಮುಸ್ಲಿಂ ಮಹಿಳೆಯೊಬ್ಬರು ಇಡೀ ಸಮುದಾಯದ ವಿರೋಧದ ನಡುವೆಯೂ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರ ಪುಟ್ಟ ಸಂಸಾರದಲ್ಲಿ ಎರಡು ಮುದ್ದಾದ ಹೆಣ್ಣು ಮಕ್ಕಳು ಜನಿಸಿದವು. ಆದರೆ, ಹೆಣ್ಣು ಮಕ್ಕಳಾದವು ಎಂಬ ಕ್ರೂರ ಕಾರಣಕ್ಕೆ ಪತಿಯೇ ಮೊದಲ ಹೆಣ್ಣು ಮಗುವನ್ನು ಕೊಲೆ ಮಾಡಿ ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದಾನೆ. ಇತ್ತ ಪತಿಯ ಕ್ರೌರ್ಯದಿಂದ ಮೊದಲ ಮಗಳನ್ನು ಕಳೆದುಕೊಂಡ ತಾಯಿ, ಈಗ ಇರುವ ಎರಡನೇ ಮಗಳ ಜೀವನವನ್ನು ರೂಪಿಸಲು ಗದಗನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ನಿರಂತರವಾಗಿ ಅಲೆಯುವಂತಾಗಿದೆ.

ಎರಡನೇ ಮಗಳ ಶಾಲೆ ಸೇರ್ಪಡೆ ಹಾಗೂ ಎಸ್ಐಆರ್ (SIR) ದಾಖಲಾತಿಗಾಗಿ ತಂದೆಯ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆದರೆ, ಹಿಂಡಲಗಾ ಕಾರಾಗೃಹದ ಅಧಿಕಾರಿಗಳು ಈಕೆಗೆ ಸರಿಯಾಗಿ ಸ್ಪಂದಿಸದ ಕಾರಣ, ಆಕೆ ಅಸಹಾಯಕಳಾಗಿ ಬೀದಿ ಬೀದಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಕೆಗೆ ಈಗ ಬೇಕಿರುವುದು ಅಪರಾಧಿ ಗಂಡನಲ್ಲ, ಬದಲಿಗೆ ಮಗಳ ಉಜ್ವಲ ಭವಿಷ್ಯಕ್ಕಾಗಿ ಆತನ ಆಧಾರ್ ಕಾರ್ಡ್ ಮಾತ್ರ. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ನೊಂದ ತಾಯಿಯ ನೆರವಿಗೆ ಬಂದು, ಆಕೆಯ ಮಗಳಿಗೆ ಶಿಕ್ಷಣ ಸಿಗುವಂತೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!