ಬೆಳಗಾವಿಯ ಕ್ರೀಡಾಂಗಣದಲ್ಲಿ ಸಂತ ಮೀರಾ ಶಾಲೆಯ ಕ್ರೀಡಾಪಟುಗಳು ಹೊಸ ಇತಿಹಾಸ ಬರೆದಿದ್ದಾರೆ. ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯ ನಾಲ್ಕೂ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಶಾಲೆಗೆ ಅಭೂತಪೂರ್ವ ಕೀರ್ತಿ ತಂದಿದ್ದಾರೆ. ಸದ್ಯ ಈ ವಿಜೇತ ತಂಡಗಳು ರಾಜ್ಯ ಮಟ್ಟದ ಪಂದ್ಯಾವಳಿಗೆ ಲಗ್ಗೆ ಇಟ್ಟಿವೆ.

ವಿದ್ಯಾಭಾರತಿ ಕರ್ನಾಟಕ ಪ್ರಾಯೋಜಿತ ಹಾಗೂ ಅಣಗೋಳದ ಸಂತ ಮೀರಾ ಇಂಗ್ಲಿಷ್ ಶಾಲೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾವಳಿಯು ಟಿಳಕವಾಡಿಯ ಲೇಲೆ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು. ಈ ಟೂರ್ನಿಯಲ್ಲಿ ಸಂತ ಮೀರಾ ಶಾಲೆ ನಾಲ್ಕೂ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಪ್ರಾಥಮಿಕ ಬಾಲಕಿಯರ ಫೈನಲ್‌ನಲ್ಲಿ ಭಾತ್ಕಾಂಡೆ ತಂಡವನ್ನು 2-1 ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದರೆ, ಬಾಲಕರ ವಿಭಾಗದಲ್ಲೂ ಸಂತ ಮೀರಾ ತಂಡ ವಿಜೇತವಾಯಿತು. ಇನ್ನು ಪ್ರೌಢಶಾಲಾ ವಿಭಾಗದ ಬಾಲಕರ ಫೈನಲ್‌ನಲ್ಲಿ ಖಾನಾಪುರದ ಶಾಂತಿನಿಕೇತನ ತಂಡವನ್ನು 2-0 ಗೋಲುಗಳಿಂದ ಹಾಗೂ ಬಾಲಕಿಯರ ಫೈನಲ್‌ನಲ್ಲಿ ಭಾತ್ಕಾಂಡೆ ಶಾಲೆಯನ್ನು 2-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪಂದ್ಯದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಮಾಧವ ಪುಣೇಕರ್, ಮಾಜಿ ರಾಷ್ಟ್ರೀಯ ಆಟಗಾರ ಜೀವಧನ್ ಪಾವಶೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಿದರು.
