ಬೆಳಗಾವಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಗೆ ಕುಂದಾನಗರಿ ಬೆಳಗಾವಿಯ ಜನಜೀವನ ಸಂಪೂರ್ಣ ತತ್ತರಗೊಂಡಿದೆ. ನಗರದ ಹಲವೆಡೆ ಮರಗಳು ಧರೆಗುರುಳಿದ್ದು, ಪಾಲಿಕೆಯ ವಿಪತ್ತು ನಿರ್ವಹಣಾ ತಂಡ ಸಮರೋಪಾದಿಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದೆ.


ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಪ್ರಮುಖ ಬಡಾವಣೆಗಳಾದ ಕುಮಾರಸ್ವಾಮಿ ಲೇಔಟ್ ಹಾಗೂ ಸಂಗಮೇಶ್ವರ ನಗರದ ವಿವಿಧೆಡೆ ಬೃಹತ್ ಮರಗಳು ರಸ್ತೆಗೆ ಧರೆಗುರುಳಿವೆ. ಇದರಿಂದಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ತಂಡವು ಮರಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಇಷ್ಟೆಲ್ಲಾ ಮಳೆ ಆರ್ಭಟದ ನಡುವೆಯೂ ಸಾರ್ವಜನಿಕರು ಅನಿವಾರ್ಯ ಕೆಲಸಗಳಿಗಾಗಿ ಕೊಡೆ, ರೇನ್ಕೋಟ್ ಧರಿಸಿ ರಸ್ತೆಗಿಳಿದು ಓಡಾಡುತ್ತಿರುವ ದೃಶ್ಯಗಳು ನಗರದಾದ್ಯಂತ ಕಂಡುಬರುತ್ತಿವೆ.
