ಬೆಳಗಾವಿಯಲ್ಲಿ ನಡೆದ ಕಿತ್ತೂರು ಕರ್ನಾಟಕ ವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ, ರಾಜ್ಯದ ನೀರಾವರಿ ಯೋಜನೆಗಳ ಆಧುನೀಕರಣ, ಕುಡಿಯುವ ನೀರಿನ ಸಮಸ್ಯೆ ಮತ್ತು ರೈತರ ಹಿತರಕ್ಷಣೆಗೆ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರಗಳನ್ನು ಹಂಚಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಸರ್ವಪಕ್ಷ ಶಾಸಕರು ಹಾಗೂ ಸಂಸದರೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ವಾಡಿಕೆ ಮಳೆಯಾಗದ ಹಿನ್ನೆಲೆ ತುಂಗಭದ್ರಾ ಜಲಾಶಯದಲ್ಲಿ ಭೀಕರ ಸಮಸ್ಯೆಯಿದೆ ಎಂದರು. 50 ವರ್ಷ ಹಳೆಯದಾದ ನೀರಾವರಿ ಯೋಜನೆಗಳ ಗೇಟ್ಗಳನ್ನು ಬದಲಾಯಿಸಲು ವರದಿ ತರಿಸಿಕೊಳ್ಳಲಾಗುತ್ತಿದ್ದು, ತುಂಗಭದ್ರೆಯ ಹೂಳು ನಿವಾರಣೆಗೆ ಆಂಧ್ರ ಸಿಎಂ ಜೊತೆ ಚರ್ಚಿಸಲಾಗಿದೆ. ಈ ಸಮಸ್ಯೆಯ ಬಗೆಹರಿಕೆಗೆ ಮೂರು ರಾಜ್ಯಗಳ ಸಿಎಂಗಳ ಐತಿಹಾಸಿಕ ಸಭೆ ನಡೆಸಿ ಕೇಂದ್ರ ಸಮಿತಿ ರಚನೆಗೆ ನಿರ್ಧರಿಸಲಾಗಿದ್ದು, ಕೃಷ್ಣಾ, ಕಾವೇರಿ ಒಪ್ಪಂದದ 1 ಲಕ್ಷ ಕೋಟಿಯ ಯೋಜನೆಗೆ ಕೇಂದ್ರದ ಸಮ್ಮತಿ ಕೋರಲಾಗಿದೆ.
ರಾಜ್ಯಾದ್ಯಂತ ತಲೆದೂರಿರುವ ಕುಡಿಯುವ ನೀರಿನ ಕೊರತೆ ನೀಗಿಸಲು ಜಲಾಶಯಗಳಲ್ಲಿ ನೀರು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದು ಡಿಸಿಎಂ ತಿಳಿಸಿದರು. ನಗರ ಪ್ರದೇಶ ಹೊರತುಪಡಿಸಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಕೋಟಿ ರೂಪಾಯಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲು ಒಪ್ಪಿಗೆ ಸೂಚಿಸಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಿ ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೇಂದ್ರ ಸರ್ಕಾರ ಶೇ.50 ರಷ್ಟು ಮಾತ್ರ ರಸಗೊಬ್ಬರ ನೀಡಿರುವ ಕುರಿತು ಬೆಂಗಳೂರಿನಲ್ಲಿ ಶೀಘ್ರದಲ್ಲೇ ಮತ್ತೊಂದು ಸಭೆ ಕರೆಯಲಾಗುವುದು ಎಂದರು.
ಇದೇ ವೇಳೆ ಅರಣ್ಯ ಇಲಾಖೆಯ ನಿಯಮಾವಳಿಗಳ ಕುರಿತು ಮಾತನಾಡಿದ ಅವರು, ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳ ಭೂಗತ ವಾಹಿನಿ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಯಾವುದೇ ನಿರ್ಬಂಧ ಹೇರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು. ಕಾನೂನಿನ ನಿಯಮಗಳ ಪ್ರಕಾರ ಯಾವುದೇ ಕಾರಣಕ್ಕೂ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದು. ಅನ್ನದಾತರ ಮತ್ತು ಸಾಗುವಳಿದಾರರ ರಕ್ಷಣೆ ಮಾಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆ ಹಾಗೂ ನೀತಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
