ಬೆಳಗಾವಿಯಲ್ಲಿ ಮುಂಬರುವ 12 ದಿನಗಳ ಸಾಂಸ್ಕೃತಿಕ ವೈಭವದ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳುವಂತೆ ‘ಮಧ್ಯವರ್ತಿ ಸಾರ್ವಜನಿಕ ಶ್ರೀಗಣೇಶೋತ್ಸವ ಮಹಾಮಂಡಳ’ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸೆಪ್ಟೆಂಬರ್ 14 ರಿಂದ 25 ರವರೆಗೆ ನಡೆಯಲಿರುವ ಈ ಉತ್ಸವದ ಸುಗಮ ನಿರ್ವಹಣೆಗೆ ಏಕಗವಾಕ್ಷಿ ಪದ್ಧತಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಲಾಗಿದೆ.”


ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ‘ಮಧ್ಯವರ್ತಿ ಸಾರ್ವಜನಿಕ ಶ್ರೀಗಣೇಶೋತ್ಸವ ಮಹಾಮಂಡಳ’ವು, ಶೀಘ್ರವೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಪೂರ್ವಭಾವಿ ಸಿದ್ಧತಾ ಸಭೆ ಕರೆಯುವಂತೆ ಕೋರಿದೆ. ಗಣೇಶ ಮಂಡಳಿಗಳಿಗೆ ಅನುಮತಿ ನೀಡಲು ಹಳೆಯ ಪಾಲಿಕೆ ಕಟ್ಟಡ, ಗೋವಾವೇಸ್ ವೃತ್ತ ಮತ್ತು 8 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ‘ಏಕಗವಾಕ್ಷಿ’ ವ್ಯವಸ್ಥೆ ಮಾಡುವುದು, ಹಾನಿಗೊಳಗಾದ ರಸ್ತೆಗಳನ್ನು ಪೇವರ್ ಬ್ಲಾಕ್ ಬಳಸಿ ಶಾಶ್ವತವಾಗಿ ದುರಸ್ತಿಗೊಳಿಸುವುದು, ಸ್ವಚ್ಛತೆ ಕಾಯ್ದುಕೊಳ್ಳುವುದು ಹಾಗೂ ಹೆಸ್ಕಾಂ ವತಿಯಿಂದ ವಿದ್ಯುತ್ ದೀಪಗಳ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಪ್ರಮುಖ 15 ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಇದರೊಂದಿಗೆ ಮೆರವಣಿಗೆ ಮಾರ್ಗಗಳಲ್ಲಿ ಮೊಬೈಲ್ ಶೌಚಾಲಯ, ರಾತ್ರಿ ವೇಳೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ, ಸಾರ್ವಜನಿಕರಿಗೆ ವೀಕ್ಷಣಾ ಗ್ಯಾಲರಿ ನಿರ್ಮಾಣ ಮತ್ತು ಹೆಸ್ಕಾಂನ ತಾತ್ಕಾಲಿಕ ವಿದ್ಯುತ್ ಸಂಪರ್ಕ ಬಾಂಡ್ ನಿಯಮಗಳನ್ನು ಸಡಲಿಸುವಂತೆ ಮಹಾಮಂಡಳವು ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಈ ವೇಳೆ ಗಣೇಶೋತ್ಸವ ಮಂಡಳದ ಅಧ್ಯಕ್ಷರಾದ ರಮಾಕಾಂತ್ ಕೊಂಡೂಸ್ಕರ್, ಉಪಾಧ್ಯಕ್ಷರಾದ ರಣಜೀತ್ ಚವ್ಹಾಣ್ ಪಾಟೀಲ್, ಕಾರ್ಯದರ್ಶಿ ಆನಂದ ಆಪ್ಟೇಕರ್, ಜನಸಂಪರ್ಕ ಅಧಿಕಾರಿ ವಿಕಾಸ್ ಕಲಘಟಗಿ, ಮಹಾದೇವ ಪಾಟೀಲ್, ಸಾಗರ ಪಾಟೀಲ್, ಪ್ರಸಾದ್ ಮರಗಾಳೆ, ಸುನೀಲ್ ಬೋಕಡೆ, ದುರ್ಗಾಪ್ರಸಾದ್ ಜೋಷಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
