ಪಶ್ಚಿಮ ಘಟ್ಟಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಂತುರ್ಗಾ ಗ್ರಾಮದ ಹೊರವಲಯದಲ್ಲಿರುವ ಹಾಲಾತ್ರಿ ಹಳ್ಳ ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ಖಾನಾಪುರ ಪಟ್ಟಣದಿಂದ ಸುಮಾರು 30 ಹಳ್ಳಿಗಳ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಖಾನಾಪುರ ತಾಲೂಕಿನ ಹಾಲಾತ್ರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಳ್ಳದ ಮೇಲಿರುವ ಹಳೆಯ ಸೇತುವೆ ಯಾವುದೇ ಕ್ಷಣದಲ್ಲಾದರೂ ಮುಳುಗಡೆಯಾಗುವ ಭೀತಿ ಎದುರಾಗಿದೆ. ಒಂದು ವೇಳೆ ಈ ಸೇತುವೆ ಜಲಾವೃತಗೊಂಡರೆ, ಖಾನಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 30ಕ್ಕೂ ಹೆಚ್ಚು ಗ್ರಾಮಗಳ ಜನಜೀವನ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಮರುಕಳಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಆತಂಕದಲ್ಲಿ ದಿನ ದೂಡುವಂತಾಗಿದೆ.
ಹಾಲಾತ್ರಿ ಹಳ್ಳದ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಸ್ಥಳೀಯರು ಹಲವಾರು ವರ್ಷಗಳಿಂದ ಸತತವಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತೀವ್ರ ನಿರ್ಲಕ್ಷ್ಯದಿಂದಾಗಿ ಈ ಹಳ್ಳದ ಸೇತುವೆ ಸುಧಾರಣೆಯ ಭಾಗ್ಯವನ್ನು ಕಂಡಿಲ್ಲ. ವ್ಯವಸ್ಥೆಯ ಈ ಬೇಜವಾಬ್ದಾರಿತನಕ್ಕೆ ಪ್ರತಿವರ್ಷ 30ಕ್ಕೂ ಹೆಚ್ಚು ಹಳ್ಳಿಗಳ ಶಾಲಾ ಮಕ್ಕಳು, ರೈತರು ಮತ್ತು ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಪರದಾಡುವಂತಾಗಿದೆ. ಇನ್ನಾದರೂ ಆಡಳಿತ ವರ್ಗ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
