ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಕೊರ್ತಿ ಬಳಿ ಆಲಮಟ್ಟಿ ಜಲಾಶಯದ ಹಿನ್ನೀರು ಸಂಗ್ರಹವಾಗುತ್ತಿದ್ದು, ತೀವ್ರ ಬರಗಾಲದ ಭೀತಿಯಲ್ಲಿದ್ದ ಅನ್ನದಾತ ನಿಟ್ಟುಸಿರು ಬಿಟ್ಟಿದ್ದಾನೆ.


ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಜಿಲ್ಲೆಯ ಕೊರ್ತಿ ಬಳಿ ಆಲಮಟ್ಟಿ ಜಲಾಶಯದ ಹಿನ್ನೀರು ವೇಗವಾಗಿ ಸಂಗ್ರಹವಾಗುತ್ತಿದ್ದು, ತೀವ್ರ ಬರಗಾಲದ ಆತಂಕದಲ್ಲಿದ್ದ ಜಿಲ್ಲೆಯ ರೈತ ಸಮುದಾಯದಲ್ಲಿ ಸದ್ಯ ಸಮಾಧಾನ ಹಾಗೂ ಹರ್ಷದ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ, ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ರೈತರು ತಮ್ಮ ತೋಟ ಹಾಗೂ ಜಮೀನುಗಳಲ್ಲಿದ್ದ ಪಂಪ್ಸೆಟ್ ಮತ್ತು ಮೋಟಾರ್ಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಮುಂದಾಗಿದ್ದು, ಜಿಲ್ಲಾಡಳಿತ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದೆ.
