ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರ ಜೀವಕ್ಕೆ ಆಪತ್ತು ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ತುರ್ತಾಗಿ ವೇಗ ನಿಯಂತ್ರಕಗಳನ್ನು (ಸ್ಪೀಡ್ ಬ್ರೇಕರ್ಸ್) ಅಳವಡಿಸುವಂತೆ ಒತ್ತಾಯಿಸಿ ಹಲಗಾ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಳಗಾವಿ-ಹಲಗಾ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಹಲಗಾ-ಬಸ್ತವಾಡ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನಗಳು ಅತಿ ವೇಗವಾಗಿ ಚಲಿಸುತ್ತಿವೆ. ಇದರಿಂದಾಗಿ ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ಕಾರ್ಮಿಕರು ಹಾಗೂ ಜಾನುವಾರುಗಳ ಜೀವಕ್ಕೆ ನಿರಂತರ ಅಪಾಯ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಜೈನ ಸ್ಮಶಾನದ ಮುಂಭಾಗ, ಸುಭಾವು ಸಾಗರ್ ನಗರ ಕಾರ್ನರ್, ಕನ್ನಡ ಪ್ರಾಥಮಿಕ ಶಾಲೆ ಎದುರು, ಲಕ್ಷ್ಮಿ ಗಲ್ಲಿಯ ಪಶ್ಚಿಮ ತುದಿ, ನ್ಯೂ ಗಲ್ಲಿ, ಬಸವಣ್ಣ ಗಲ್ಲಿ ಹಾಗೂ ಓಂಕಾರ ನಗರ ಕ್ರಾಸ್ ಪ್ರದೇಶಗಳಲ್ಲಿ ತುರ್ತಾಗಿ ಗತಿರೋಧಕಗಳನ್ನು (ಸ್ಪೀಡ್ ಬ್ರೇಕರ್ಗಳು) ನಿರ್ಮಿಸಬೇಕು ಎಂದು ಗ್ರಾಮಸ್ಥರು ತಮ್ಮ ಮನವಿಯಲ್ಲಿ ತೀವ್ರವಾಗಿ ಒತ್ತಾಯಿಸಿದ್ದಾರೆ. ಹಲಗಾ ಗ್ರಾಮಸ್ಥರ ನಿಯೋಗವು ಸಿಇಒ ರಾಹುಲ್ ಶಿಂಧೆ ಅವರನ್ನು ಭೇಟಿಯಾಗಿ, ಈ ಸಮಸ್ಯೆ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ್ದಾಗಿದ್ದು ತಕ್ಷಣವೇ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಆದೇಶಿಸುವಂತೆ ವಿನಂತಿಸಿತು. ಗ್ರಾಮಸ್ಥರ ಅಹವಾಲನ್ನು ಆಲಿಸಿದ ಜಿ.ಪಂ. ಸಿಇಒ ಅವರು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಆಡಳಿತ ಮಂಡಳಿಯು ಈ ಬೇಡಿಕೆಗೆ ಎಷ್ಟು ಬೇಗ ಸ್ಪಂದಿಸಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಹಲಗಾ ಭಾಗದ ನಾಗರಿಕರು ಕಾತರದಿಂದ ಕಾಯುತ್ತಿದ್ದಾರೆ.ಈ ಸಂದರ್ಭದಲ್ಲಿ ನ್ಯಾಯವಾದಿ ಅಣ್ಣಾಸಾಹೇಬ್ ಘೋರಪಡೆ, ಸ್ನೇಹಾ ಘೋರ್ಪಡೆ ಲಾಡ್, ಗಣೇಶ್ ಭಾವಿಕಟ್ಟಿ, ಶರದ ದೇಸಾಯಿ, ರಾಮನಾಥ್ ನಲವಡೆ, ಮಹೇಂದ್ರ ಕಾಂಬಳೆ, ಗುರುದೇವ ಮಠಪತಿ, ವಿಭೂತಿಮಠ, ಮೋಹನ ಸಂತಾಜೀ, ಸುನಂದಾ ಸಂತಾಜೀ, ಕಲಾವತಿ, ವಿದ್ಯಾ ಕಾಳೀಂಗ, ಸಂತಾಜೀ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
