ಹನಿಟ್ರ್ಯಾಪ್ ಹೆಸರಿನಲ್ಲಿ ಯುವಕನನ್ನು ಬಲೆಗೆ ಬೀಳಿಸಿ ಅಪಹರಿಸಿ ₹12 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಸಂಚನ್ನು ಗಾಂಧಿಚೌಕ ಠಾಣೆ ಪೊಲೀಸರು ಭೇದಿಸಿದ್ದಾರೆ. ಜಮೀನು ಮಾರಾಟದಿಂದ ಕುಟುಂಬದ ಬಳಿ ಹಣವಿದೆ ಎಂಬ ಮಾಹಿತಿ ಆಧರಿಸಿ ಈ ಕೃತ್ಯ ಎಸಗಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಕ್ಕೊಳಗಾಗಿದ್ದ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಕುರಿತು ಇಲ್ಲಿದೆ ಒಂದು ವರದಿ…

ಹೌದು…ವಿಜಯಪುರ ನಗರದ ಕಸ್ತೂರಿ ಕಾಲೋನಿಯ ಸಾಹಿಲ್ ಚಪ್ಪರಬಂದ ಎಂಬ ಯುವಕನ ಕುಟುಂಬ ಎರಡು ತಿಂಗಳ ಹಿಂದೆ ಎರಡು ಎಕರೆ ಜಮೀನನ್ನು ₹26 ಲಕ್ಷಕ್ಕೆ ಮಾರಾಟ ಮಾಡಿತ್ತು. ಈ ವಿಚಾರ ಸಾಹಿಲ್ ಜೊತೆ ಸರ್ಕಾರಿ ಆಸ್ಪತ್ರೆಯಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಹಮ್ಮದರಫೀಕ್ ನದಾಫ್ಗೆ ತಿಳಿದಿತ್ತು. ಹಣ ಸುಲಿಗೆ ಮಾಡುವ ಉದ್ದೇಶದಿಂದ ಆತ ತನ್ನ ಸಹಚರರೊಂದಿಗೆ ಸೇರಿ ಹನಿಟ್ರ್ಯಾಪ್ ಸಂಚು ರೂಪಿಸಿದ್ದ. ಈ ಯೋಜನೆಯಂತೆ ನಗರದ ಪಿಜಿಯಲ್ಲಿ ವಾಸಿಸುತ್ತಿದ್ದ ವಿಜಯಲಕ್ಷ್ಮಿ ಎಂಬ ಮಹಿಳೆಯ ಮೂಲಕ ಸಾಹಿಲ್ಗೆ ಕರೆ ಮಾಡಿ ಭೇಟಿಯಾಗುವಂತೆ ಆಹ್ವಾನಿಸಲಾಗಿತ್ತು.
ಹೀಗೆ ಭೇಟಿಗಾಗಿ ಜೂನ್ 18ರ ರಾತ್ರಿ ಸರ್ಕಾರಿ ಆಸ್ಪತ್ರೆ ಹಿಂಭಾಗದ ಖಾಲಿ ಜಾಗಕ್ಕೆ ಬಂದ ಸಾಹಿಲ್ನನ್ನು ಆರೋಪಿಗಳು ಸ್ಕಾರ್ಪಿಯೋ ವಾಹನದಲ್ಲಿ ಅಪಹರಿಸಿ, ಕುಟುಂಬಸ್ಥರಿಗೆ ₹12 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದರು. ಮರುದಿನ ಸಾಹಿಲ್ನ ತಾಯಿ ಗಾಂಧಿಚೌಕ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ವಿಶೇಷ ತನಿಖಾ ತಂಡ ರಚಿಸಿ ಮೊಬೈಲ್ ಕರೆಗಳ ಮಾಹಿತಿ, ತಾಂತ್ರಿಕ ಸಾಕ್ಷ್ಯಗಳು ಹಾಗೂ ವಿವಿಧ ಸುಳಿವುಗಳ ಆಧಾರದಲ್ಲಿ ತನಿಖೆ ಆರಂಭಿಸಲಾಯಿತು. ತನಿಖೆಯ ವೇಳೆ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿದ ಪೊಲೀಸರು ಬೆಳಗಾವಿ ಜಿಲ್ಲೆಯ ಘಟಪ್ರಭಾ ಸಮೀಪ ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾಗಿದ್ದ ಸಾಹಿಲ್ನನ್ನು ಸುರಕ್ಷಿತವಾಗಿ ರಕ್ಷಿಸಿದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಗೋಪಾಲ ಮಾದರ, ದಶರಥ ಮಾದರ, ಶಿವಾನಂದ ನಂದಿಕೋಲಮಠ, ಸುನೀಲ ನಾವಿ, ಶಿವಕುಮಾರ ಹೊಸಟ್ಟಿ, ನಿಂಗಪ್ಪ ನಾವದಗಿ, ಮಹಮ್ಮದರಫೀಕ್ ನದಾಫ್ ಹಾಗೂ ವಿಜಯಲಕ್ಷ್ಮಿ ತೊನಶ್ಯಾಳ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿ, ಅಪಹರಣಕ್ಕೆ ಬಳಸಿದ್ದ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಒಟ್ನಲ್ಲಿ ಹನಿಟ್ರ್ಯಾಪ್, ಕಿಡ್ನಾಪ್ ಪ್ರಕರಣವನ್ನು ಭೇದಿಸಿದ ಗಾಂಧಿಚೌಕ ಠಾಣೆ ಪೊಲೀಸರ ಕಾರ್ಯಾಚರಣೆ ಗಮನ ಸೆಳೆದಿದೆ. ಪೊಲೀಸರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
