ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರ ಪ್ರವಾಸದ ಕುರಿತು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಸಂತಹ ವ್ಯಕ್ತಪಡಿಸಿದ್ದು, ರೈತರು ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಖಾನಾಪುರ ತಾಲೂಕಿನ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ಹಾಲಿ ಶಾಸಕರ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದಲೂ ಬೆಳಗಾವಿ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಇದೀಗ ಸಿಎಂ ಆದ ಬಳಿಕ ಜಿಲ್ಲೆಯ ನೀರಾವರಿ ಹಾಗೂ ರೈತರ ಸಮಸ್ಯೆಗಳನ್ನು ಖಂಡಿತವಾಗಿಯೂ ನಿವಾರಿಸಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಜನಪರ ಕೆಲಸಗಳನ್ನು ನೋಡಿ ಬಿಜೆಪಿ ಶಾಸಕರು ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ನಮಗೆ ಸಹಕಾರ ನೀಡಿದ ಖಾನಾಪುರದ ಹಾಲಿ ಶಾಸಕರಿಗೂ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದರು.
ಇದೇ ವೇಳೆ ಖಾನಾಪುರದ ಹಾಲಿ ಶಾಸಕ ವಿಠ್ಠಲ ಹಲಗೇಕರ ವಿರುದ್ಧ ಕಿಡಿಕಾರಿದ ಅವರು, ಕಳೆದ 3 ವರ್ಷಗಳಲ್ಲಿ ಖಾನಾಪುರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಮತ್ತು ಶಾಸಕರೇ ತಾವೂ ಕೆಲಸ ಮಾಡಲು ಅಸಮರ್ಥರೆಂದು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ತಮ್ಮ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದಿರುವ ಶಾಸಕರು, ತಮ್ಮ ಸೋಲಿಗೆ ಯಾರು ಕಾರಣ ಎಂಬುದನ್ನೂ ಸ್ಪಷ್ಟಪಡಿಸಬೇಕು; ತಪ್ಪು ಮಾಡಿದೆವೆಂದು ಪಶ್ಚಾತ್ತಾಪ ಪಡುತ್ತಿರುವ ಕ್ಷೇತ್ರದ ಜನರು ಮುಂದಿನ ಬಾರಿ ತಮಗೆ ಮತ್ತೆ ಆಶೀರ್ವದಿಸಲಿದ್ದಾರೆ ಎಂದು ಅಂಜಲಿ ನಿಂಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
