ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಠರಾವ್ ಪಾಸ್ ಮಾಡಬೇಕೆಂದು ಕನ್ನಡ ಜಾಗೃತಿ ಸಮಿತಿ ಆಗ್ರಹಿಸಿತು.

ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಮಿತಿ ಸದಸ್ಯ ನ್ಯಾಯವಾದಿ ರವೀಂದ್ರ ತೋಟಿಗೇರ, ಸಮಿತಿಯ ಈ ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಹಾಗೂ ಕೆ.ಎಂ.ಸಿ. ಕಾಯ್ದೆ 1976 ರ ಅಡಿಯಲ್ಲಿ ಪಾಲಿಕೆಯು ಒಂದು ಸ್ಥಳೀಯ ಸಂಸ್ಥೆಯಾಗಿದ್ದು ಬೆಳಗಾವಿಯೂ ಸಹ ಕರ್ನಾಟಕದ ಆಡಳಿತಾತ್ಮಕ ವ್ಯವಸ್ಥೆಯ ಒಂದು ಭಾಗವಾಗಿದೆ ಈ ಹಿನ್ನೆಲೆಯಲ್ಲಿ ‘ಮಹಾಜನ ವರದಿ ಅಂತಿಮ’ ಹಾಗೂ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಠರಾವುಗಳನ್ನು ತೆಗೆದುಕೊಳ್ಳಲು ಕಾನೂನಿನ ಯಾವುದೇ ಅಡೆತಡೆಗಳಿಲ್ಲದರಿಂದ ವಿಳಂಬ ಮಾಡದೆ ಪಾಲಿಕೆಯ ಪರಿಷತ್ ಸಭೆಯಲ್ಲಿ ಘಂಟಾಘೋಷವಾಗಿ ಠರಾವು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯ ರಾಜಶೇಖರ ತಳವಾರ ಅವರು ಪಾಲಿಕೆಯಿಂದ ಅಳವಡಿಸಲಾದ ಸ್ವಾಗತ ಕಮಾನುಗಳಲ್ಲಿ “ಕುಂದಾ ನಗರಿಗೆ ಸ್ವಾಗತ” ಎಂದು ಬರೆಯಲಾಗುತ್ತಿದ್ದು, ಅದು ಹೊರನಾಡಿನ ಖಾದ್ಯವಾಗಿದ್ದು,ಅಗತ್ಯ ದಾಖಲೆಗಳೂ ಇಲ್ಲದ್ದರಿಂದ ಅದನ್ನು ಕೈ ಬಿಟ್ಟು ಐತಿಹಾಸಿಕ ಕುರುಹು ಆಗಿರುವ ” ರಟ್ಟರ ನಗರಕ್ಕೆ ಸ್ವಾಗತ ” ಎಂದು ಇರುವ ಫಲಕಗಳನ್ನು ಅಳವಡಿಸಬೇಕು.
ಇನ್ನೂ ಬಹಳಷ್ಟು ವ್ಯಾಪಾರಸ್ಥರು ಅಂಗಡಿಗಳ ಫಲಕಗಳಲ್ಲಿ ಶೇ.60 ರಷ್ಟು ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಈ ಕುರಿತು ಪಾಲಿಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗಡಿನಾಡಿನ 35 ಕ್ಕೂ ಹೆಚ್ಚು ಕನ್ನಡ ಶಾಲೆಗಳಿಗೆ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಶಿಫಾರಸು ಮಾಡಿದರೆ ಮತ್ತಷ್ಟು ಶಾಲೆಗಳಿಗೆ ನೀಡಲು ಪ್ರಾಧಿಕಾರ ಬದ್ಧವಾಗಿದೆ ಎಂದರು.
ಕನ್ನಡ ಜಾಗೃತಿ ಜಾಥಾ, ಭಾಷಾ ಭಾವೈಕ್ಯತಾ ಸಮಾವೇಶ, ಕನ್ನಡ ನುಡಿ ಹಬ್ಬ ಮುಂತಾದವುಗಳನ್ನು ಪಾಲಿಕೆಯಿಂದ ಹಮ್ಮಿಕೊಳ್ಳುವುದರ ಮೂಲಕ ಕನ್ನಡ ಕಟ್ಟುವಲ್ಲಿ ಸಹಯೋಗ ನೀಡಬೇಕೆಂದು ಸದಸ್ಯರು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಅವರು, ಜಾಗೃತಿ ಸಮಿತಿಯ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಕೆ.ಎನ್. ದೊಡಮನಿ, ಮಹಾದೇವಿ ಹುಣಸಿಬೀಜ,ಕ.ಸಂ. ಇಲಾಖೆ ಪ್ರತಿನಿಧಿ, ಕಾನೂನು ಅಧಿಕಾರಿ ಭೀಮರಾವ್ ಜಿನರಾಳಕರ, ಪಾಲಿಕೆ ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್, ಕಂದಾಯ ವಿಭಾಗದ ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ, ಅಭಿಯಂತರ ಹಣಮಂತ ಕಲಾದಗಿ ಸೇರಿದಂತೆ ಇತರೆ ಅಧಿಕಾರಿಗಳು ಕನ್ನಡ ಪರ ಕಾರ್ಯಕರ್ತರು ಉಪಸ್ಥಿತರಿದ್ದರು.
