ಕರ್ನಾಟಕ ರಾಜ್ಯ ಸಂಘಟನೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಜಲತರಂಗ ತಲಾವಿನಲ್ಲಿ ಆಯೋಜಿಸಲಾಗಿದ್ದ ಜ್ಯೂನಿಯರ್ ಜಲತರಂಗ ಸ್ಪರ್ಧೆಯಲ್ಲಿ ಬೆಳಗಾವಿಯ ಆಬಾ ಹಾಗೂ ಹಿಂದ್ ಸ್ಪೋರ್ಟ್ಸ್ ಕ್ಲಬ್‌ನ ಈಜುಗಾರ ತನುಜ್ ಸಿಂಗ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಬೆಳಗಾವಿ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಅತ್ಯಂತ ರೋಮಾಂಚನಕಾರಿಯಾಗಿ ನಡೆದ ಈ ಜಲತರಂಗ ಸ್ಪರ್ಧೆಯಲ್ಲಿ ತನುಜ್ ಸಿಂಗ್ ಅವರು 50 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 30.64 ಸೆಕೆಂಡುಗಳಲ್ಲಿ ಹಾಗೂ 200 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 2 ನಿಮಿಷ 32.09 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡು ರಜತ ಪದಕಗಳನ್ನು ಗೆದ್ದುಕೊಂಡರು. ಅಲ್ಲದೆ, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 1 ನಿಮಿಷ 09.48 ಸೆಕೆಂಡುಗಳ ಸಾಧನೆಯೊಂದಿಗೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಒರಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರೀಯ ಜ್ಯೂನಿಯರ್ ಜಲತರಂಗ ಸ್ಪರ್ಧೆಗೆ ಕರ್ನಾಟಕ ರಾಜ್ಯ ತಂಡಕ್ಕೆ ತನುಜ್ ಸಿಂಗ್ ಆಯ್ಕೆಯಾಗಿದ್ದಾರೆ. ಸಾಧಕ ಕ್ರೀಡಾಪಟುವಿಗೆ ಎನ್.ಐ.ಎಸ್. ಈಜು ತರಬೇತುದಾರರಾದ ವಿಶ್ವಾಸ್ ಪವಾರ್ ಅವರ ಮಾರ್ಗದರ್ಶನ ಹಾಗೂ ಕ್ಲಬ್ ಅಧ್ಯಕ್ಷರಾದ ಶೀತಲ್ ಹುಳಭತ್ತೆ, ಅರವಿಂದ್ ಸಂಗೋಳಿ, ಶುಭಾಂಗಿ ಮಂಗಳೂರಕರ್ ಮತ್ತು ನಗರಸೇವಕರಾದ ನಿತೀನ್ ಜಾಧವ್ ಅವರ ಪ್ರೋತ್ಸಾಹ ಲಭಿಸಿದೆ.
