Savadatti

ಬೆಳಗಾವಿ: ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ !!

Share

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಚಲಿಸುವ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ಯುವಕರ ನಡುವೆ ಮಾರಾಮಾರಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದ ಬಳಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ತೀವ್ರ ಗಲಾಟೆ ಸಂಭವಿಸಿದೆ. ಬಸ್ ಚಲಿಸುತ್ತಿದ್ದ ವೇಳೆಯಲ್ಲೇ ಜಕ್ಕಬಾಳ ಹಾಗೂ ಬಸರಗಿ ಗ್ರಾಮದ ವಿದ್ಯಾರ್ಥಿಗಳ ನಡುವೆ ಸಣ್ಣದಾಗಿ ಆರಂಭವಾದ ವಾಗ್ವಾದ, ಬಳಿಕ ಉಗ್ರರೂಪಕ್ಕೆ ತಿರುಗಿದೆ. ಕೋಪಗೊಂಡ ಯುವಕರು ರಸ್ತೆಯಲ್ಲೇ ಬೆಲ್ಟ್, ಕಲ್ಲು ಮತ್ತು ಕಟ್ಟಿಗೆಗಳನ್ನು ಹಿಡಿದು ಪರಸ್ಪರ ಮನಸೋಇಚ್ಛೆ ಹೊಡೆದಾಡಿಕೊಂಡಿದ್ದಾರೆ. ಈ ರಕ್ತಸಿಕ್ರತ ಮಾರಾಮಾರಿಯನ್ನು ಕಂಡು ಸ್ಥಳೀಯರು ಹಾಗೂ ಇತರ ಪ್ರಯಾಣಿಕರು ತೀವ್ರ ಭಯಭೀತಗೊಂಡಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ದಿನನಿತ್ಯ ಬಸ್ಸುಗಳಲ್ಲಿ ಎದುರಾಗುತ್ತಿರುವ ಇಂತಹ ಕಿರುಕುಳಗಳಿಗೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನು ಘಟನೆ ನಡೆದ ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಸವದತ್ತಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಅತ್ತ ವಾಯುವ್ಯ ಸಾರಿಗೆ ಇಲಾಖೆಯ ಅಧಿಕಾರಿಗಳೂ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

error: Content is protected !!